ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದ ನಂತರ ಇಂದೋರ್ನ ಟೀಮ್ ಇಂಡಿಯಾ ತಂಗಿದ್ದ ಹೋಟೆಲ್ನಲ್ಲಿ ನಡೆದ ಭದ್ರತಾ ಲೋಪ ಇಡೀ ಕ್ರೀಡಾಲೋಕವನ್ನು ಬೆಚ್ಚಿಬೀಳಿಸಿತ್ತು. ಹೋಟೆಲ್ನ ಬಿಗಿ ಭದ್ರತೆಯನ್ನು ಭೇದಿಸಿ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ರೋಹಿತ್ ಶರ್ಮಾ ಅವರ ಕೈ ಹಿಡಿದು ನಿಂತ ಘಟನೆಗೆ ಈಗ ಭಾವುಕ ತಿರುವು ಸಿಕ್ಕಿದೆ. ಆ ಮಹಿಳೆ ಸೆಲ್ಫಿಗಾಗಿ ಅಥವಾ ಪ್ರಚಾರಕ್ಕಾಗಿ ರೋಹಿತ್ ಬಳಿ ಬಂದಿರಲಿಲ್ಲ, ಬದಲಾಗಿ ತನ್ನ ಮರಣಶಯ್ಯೆಯಲ್ಲಿರುವ ಮಗಳನ್ನು ಉಳಿಸಿಕೊಳ್ಳುವ ಆಸರೆಯ ನಿರೀಕ್ಷೆಯಲ್ಲಿದ್ದರು ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.
ಭದ್ರತಾ ಕಣ್ತಪ್ಪಿಸಿ ರೋಹಿತ್ ಸನಿಹಕ್ಕೆ ಬಂದಿದ್ದ ‘ಸರಿತಾ’
ಮೂರನೇ ಏಕದಿನ ಪಂದ್ಯದ ನಂತರ ರೋಹಿತ್ ಶರ್ಮಾ ಹೋಟೆಲ್ ಪ್ರವೇಶಿಸುತ್ತಿದ್ದಾಗ, ಸರಿತಾ ಶರ್ಮಾ ಎಂಬ ಮಹಿಳೆ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ರೋಹಿತ್ ಅವರಿದ್ದ ಜಾಗಕ್ಕೆ ನುಗ್ಗಿದ್ದರು. ಅನಿರೀಕ್ಷಿತವಾಗಿ ಮಹಿಳೆಯೊಬ್ಬರು ತನ್ನ ಕೈ ಹಿಡಿದಿದ್ದರಿಂದ ರೋಹಿತ್ ಒಂದು ಕ್ಷಣ ದಿಗಿಲುಗೊಂಡರು. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಅಲ್ಲಿಂದ ತೆರವುಗೊಳಿಸಿ ರೋಹಿತ್ ಅವರನ್ನು ಸುರಕ್ಷಿತವಾಗಿ ಒಳಗೆ ಕರೆದೊಯ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
9 ಕೋಟಿ ರೂಪಾಯಿ ಇಂಜೆಕ್ಷನ್; ಮಗಳ ಪ್ರಾಣಕ್ಕಾಗಿ ತಾಯಿಯ ಆರ್ತನಾದ
ನಂತರ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಸರಿತಾ ಶರ್ಮಾ, ತಮ್ಮ ಕೃತ್ಯದ ಹಿಂದಿನ ನೋವನ್ನು ಹಂಚಿಕೊಂಡಿದ್ದಾರೆ. “ನನ್ನ ಎಂಟು ವರ್ಷದ ಮಗಳು ಅನಿಕಾ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಕೆಯನ್ನು ಉಳಿಸಿಕೊಳ್ಳಲು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಾದ ವಿಶೇಷ ಇಂಜೆಕ್ಷನ್ ಅಗತ್ಯವಿದೆ. ಇದರ ಬೆಲೆ ಬರೋಬ್ಬರಿ 9 ಕೋಟಿ ರೂಪಾಯಿಗಳು. ಜನರಿಂದ ದೇಣಿಗೆ ಸಂಗ್ರಹಿಸಿ 4.1 ಕೋಟಿ ರೂಪಾಯಿಗಳನ್ನು ಕ್ರೋಢೀಕರಿಸಿದ್ದೇವೆ. ಆದರೆ ಉಳಿದ ಮೊತ್ತವನ್ನು ಹೊಂದಿಸಲು ನಮಗೆ ಸಮಯವಿಲ್ಲ,” ಎಂದು ಅವರು ಕಣ್ಣೀರು ಹಾಕಿದ್ದಾರೆ.
ಕೊಹ್ಲಿ-ರೋಹಿತ್ ಸಹಾಯಕ್ಕೆ ಮೊರೆ
ತಮ್ಮ ಕೃತ್ಯಕ್ಕೆ ರೋಹಿತ್ ಶರ್ಮಾ ಮತ್ತು ಅಧಿಕಾರಿಗಳಲ್ಲಿ ಕ್ಷಮೆಯಾಚಿಸಿರುವ ಸರಿತಾ, ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸಹಾಯವನ್ನು ಕೋರಿದ್ದಾರೆ. ಇಬ್ಬರೂ ಕ್ರಿಕೆಟಿಗರು ಅನೇಕ ದತ್ತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದನ್ನು ಕೇಳಿದ್ದೇನೆ, ಆದ್ದರಿಂದ ಅಂತಿಮ ಪ್ರಯತ್ನವಾಗಿ ಅವರನ್ನು ಭೇಟಿ ಮಾಡಲು ಮುಂದಾಗಿದ್ದೆ ಎಂದು ಅವರು ವಿವರಿಸಿದ್ದಾರೆ. “ನನಗೆ ಸೆಲ್ಫಿಯಾಗಲಿ ಅಥವಾ ಪ್ರಚಾರವಾಗಲಿ ಬೇಡ, ಮಗಳ ಜೀವ ಉಳಿಸಲು ಸಹಾಯ ಬೇಕಿದೆ” ಎಂದು ಅವರು ಮನವಿ ಮಾಡಿದ್ದಾರೆ.
ರೋಹಿತ್ ಸರ್, ವಿರಾಟ್ ಸರ್… ನಾನು ಮಾಡಿದ ತಪ್ಪಿಗೆ ಕ್ಷಮಿಸಿ. ಬೇರೆ ದಾರಿಯಿಲ್ಲದೆ ನಾನು ಈ ರೀತಿ ಮಾಡಬೇಕಾಯಿತು. ನನ್ನ ಮಗಳನ್ನು ಉಳಿಸಲು ದಯವಿಟ್ಟು ಸಹಾಯ ಮಾಡಿ ಸರಿತಾ ಶರ್ಮಾ ಹೇಳಿದ್ದಾರೆ.
ಕ್ರೀಡಾ ತಾರೆಗಳ ಭದ್ರತೆ ಬಗ್ಗೆ ಕಳವಳ
ಈ ಘಟನೆಯು ಒಂದೆಡೆ ಮಾನವೀಯತೆಯ ದೃಷ್ಟಿಯಿಂದ ಜನರ ಕರುಣೆ ಗಳಿಸಿದ್ದರೂ, ಮತ್ತೊಂದೆಡೆ ಅಂತರಾಷ್ಟ್ರೀಯ ಆಟಗಾರರ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಹೋಟೆಲ್ನಂತಹ ಸುರಕ್ಷಿತ ಪ್ರದೇಶಗಳಲ್ಲಿ ಅಪರಿಚಿತರು ಹೇಗೆ ಆಟಗಾರರ ಸನಿಹಕ್ಕೆ ಬರಲು ಸಾಧ್ಯವಾಯಿತು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸದ್ಯದ ಮಾಹಿತಿಯಂತೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮುಂದಿನ ಎರಡು ತಿಂಗಳು ಅಂತರಾಷ್ಟ್ರೀಯ ಕ್ರಿಕೆಟ್ನಿಂದ ವಿಶ್ರಾಂತಿ ಪಡೆಯಲಿದ್ದು, ಐಪಿಎಲ್ 2026ರಲ್ಲಿ ಕಣಕ್ಕಿಳಿಯಲಿದ್ದಾರೆ. ಭಾರತ ತಂಡವು ಈಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದ್ದು, ಇದು ಫೆಬ್ರವರಿ 7 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ಗೆ ಸಿದ್ಧತೆಯಾಗಿದೆ.
ಇದನ್ನೂ ಓದಿ: ನಾಗ್ಪುರದಲ್ಲಿ ಅಭಿಷೇಕ್ ಶರ್ಮಾ ಸಿಡಿಲಬ್ಬರ | ವಿಶ್ವ ದಾಖಲೆಗಳ ಸುರಿಮಳೆಗೈದ ಯುವ ಬ್ಯಾಟರ್!



















