ಮುಂಬೈ: ಮಾಂಸಾಹಾರ ತಿನ್ನಲು ಬೇಕೆಂದು ಕೇಳಿದ್ದಕ್ಕೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳ ಮೇಲೆ ‘ಚಪಾತಿ ಲಟ್ಟಣಿಗೆ’ಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪರಿಣಾಮವಾಗಿ ಏಳು ವರ್ಷದ ಬಾಲಕ ಮೃತಪಟ್ಟು, ಆತನ ಸಹೋದರಿ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಭಾನುವಾರ ನಡೆದಿದೆ.
ಪೊಲೀಸರ ಪ್ರಕಾರ, ಚಿನ್ಮಯ್ ಧುಮ್ಡೆ (7) ಎಂಬ ಬಾಲಕ ತನ್ನ ತಾಯಿ ಪಲ್ಲವಿ ಧುಮ್ಡೆಗೆ ಚಿಕನ್‌ನಲ್ಲಿ ಮಾಡಿದ ಖಾದ್ಯ ಬೇಕೆಂದು ಕೇಳಿದ್ದಾನೆ. ಇದರಿಂದ ಕೋಪಗೊಂಡ ಆಕೆ, ಮಗನಿಗೆ ಪ್ರಜ್ಞೆ ತಪ್ಪುವವರೆಗೂ ಥಳಿಸಿದ್ದಾಳೆ. ನಂತರ, ಅದೇ ಲಟ್ಟಣಿಗೆಯಿಂದ ತನ್ನ 10 ವರ್ಷದ ಮಗಳಿಗೂ ಹೊಡೆದಿದ್ದಾಳೆ. ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳ ಕಿರುಚಾಟ ಕೇಳಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಸ್ಥಳೀಯ ಅಪರಾಧ ವಿಭಾಗ ಮತ್ತು ಉಪವಿಭಾಗಾಧಿಕಾರಿಗಳು ದೌಡಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ತಾಯಿಯನ್ನು ಬಂಧಿಸಿದ್ದಾರೆ.
“ಕಾಶಿಪಾದ ಪ್ರದೇಶದ ಫ್ಲಾಟ್‌ನಲ್ಲಿ 40 ವರ್ಷದ ಪಲ್ಲವಿ ಘುಮ್ಡೆ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಳು. ಆಕೆಯ ಏಳು ವರ್ಷದ ಮಗ ಚಿನ್ಮಯ್ ಗಣೇಶ್ ಘುಮ್ಡೆಯನ್ನು ಲಟ್ಟಣಿಗೆಯಿಂದ ಬರ್ಬರವಾಗಿ ಥಳಿಸಲಾಗಿದ್ದು, ಆತ ಸಾವನ್ನಪ್ಪಿದ್ದಾನೆ. ಆಕೆಯ 10 ವರ್ಷದ ಮಗಳಿಗೂ ಹೊಡೆಯಲಾಗಿದೆ. ಪಾಲ್ಘರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪಾಲ್ಘರ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶಮುಖ್ ಹೇಳಿದ್ದಾರೆ.