ನವದೆಹಲಿ: ದೆಹಲಿಯ ಆಶ್ರಮವೊಂದರಲ್ಲಿ 17ಕ್ಕೂ ಹೆಚ್ಚು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಪ್ರಕರಣದಲ್ಲಿ ಹೊಸ ಆಘಾತಕಾರಿ ವಿವರಗಳು ಹೊರಬೀಳುತ್ತಿವೆ. ಆರೋಪಿಯ ಮೊಬೈಲ್ ಫೋನ್‌ನಿಂದ ಮಹಿಳೆಯರೊಂದಿಗಿನ ಹಲವಾರು ಚಾಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆತನ ಕೃತ್ಯಗಳನ್ನು ಒಂದೊಂದಾಗಿ ಬಯಲಿಗೆಳೆಯುತ್ತಿದ್ದಾರೆ. ಈ ಚಾಟ್‌ಗಳಲ್ಲಿ ಆತ ಮಹಿಳೆಯರಿಗೆ ವಿವಿಧ ಆಮಿಷಗಳನ್ನು ಒಡ್ಡಿ ಅವರನ್ನು ಸೆಳೆಯಲು ಯತ್ನಿಸಿರುವುದು ಕಂಡುಬಂದಿದೆ.
ಪಾರ್ಥ ಸಾರಥಿ ಅಲಿಯಾಸ್ ಚೈತನ್ಯಾನಂದ ತನ್ನ ಫೋನ್‌ನಲ್ಲಿ ಹಲವು ಮಹಿಳಾ ಕ್ಯಾಬಿನ್ ಸಿಬ್ಬಂದಿ(ವಿಮಾನದಲ್ಲಿ ಕಾರ್ಯನಿರ್ವಹಿಸುವವರು)ಯೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸೇವ್ ಮಾಡಿದ್ದ. ಇದಲ್ಲದೆ, ಹಲವಾರು ಮಹಿಳೆಯರ ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್ ಚಿತ್ರಗಳ ಸ್ಕ್ರೀನ್‌ಶಾಟ್‌ಗಳನ್ನು ಕೂಡ ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನ ಇಬ್ಬರು ಮಹಿಳಾ ಸಹವರ್ತಿಗಳನ್ನು ವಶಕ್ಕೆ ಪಡೆದು, ಆರೋಪಿ ಬಾಬಾನನ್ನು ಅವರೊಂದಿಗೆ ಮುಖಾಮುಖಿಗೊಳಿಸಿ ವಿಚಾರಣೆ ನಡೆಸಲಾಗುತ್ತಿದೆ.
“ಆರೋಪಗಳ ಸುರಿಮಳೆ”
ವಸಂತ ಕುಂಜ್‌ನಲ್ಲಿರುವ ಖಾಸಗಿ ಮ್ಯಾನೇಜ್‌ಮೆಂಟ್ ಸಂಸ್ಥೆಯಾದ ‘ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್’ನ ಮಾಜಿ ನಿರ್ದೇಶಕನಾಗಿದ್ದ ಈತ, ಮಹಿಳೆಯರೊಂದಿಗೆ ಅಸಭ್ಯವಾಗಿ ಮಾತನಾಡುವುದು, ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಮತ್ತು ಬಲವಂತವಾಗಿ ದೈಹಿಕ ಸಂಪರ್ಕ ಸಾಧಿಸುತ್ತಿದ್ದ ಎಂಬ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಅಷ್ಟೇ ಅಲ್ಲದೆ, ಮಹಿಳಾ ಹಾಸ್ಟೆಲ್‌ನಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿದ್ದನೆಂಬ ಆರೋಪವೂ ಈತನ ಮೇಲಿದೆ.
“50 ದಿನಗಳ ಬಳಿಕ ಬಂಧನ”
ಸಂತ್ರಸ್ತೆಯರು ಪೊಲೀಸರಿಗೆ ಹೇಳಿಕೆ ನೀಡಿದ ನಂತರ, ಚೈತನ್ಯಾನಂದ ಕಳೆದ ಕೆಲವು ವಾರಗಳಿಂದ ತಲೆಮರೆಸಿಕೊಂಡಿದ್ದ. ಸುಮಾರು 50 ದಿನಗಳ ಕಾಲ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಈತನನ್ನು ಎರಡು ದಿನಗಳ ಹಿಂದೆ ಆಗ್ರಾದ ಹೋಟೆಲ್ ಒಂದರಲ್ಲಿ ಬಂಧಿಸಲಾಯಿತು.
“ತನಿಖೆಗೆ ಅಸಹಕಾರ”
ಆರೋಪಿ ಚೈತನ್ಯಾನಂದ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ವಿಚಾರಣೆಯ ಸಮಯದಲ್ಲಿ ಸತತವಾಗಿ ಸುಳ್ಳು ಹೇಳುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ನಿರಾಕರಿಸಲಾಗದ ಸಾಕ್ಷ್ಯಗಳನ್ನು ಮುಂದಿಟ್ಟಾಗ ಮಾತ್ರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾನೆ. ತನ್ನ ಕೃತ್ಯಗಳ ಬಗ್ಗೆ ಆತನಿಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
“ವಂಚನೆ ಪ್ರಕರಣಗಳು”
ಈ ದೇವಮಾನವ ವಿಸಿಟಿಂಗ್ ಕಾರ್ಡ್ ಮತ್ತು ಪಾಸ್‌ಪೋರ್ಟ್‌ಗಳನ್ನು ನಕಲಿ ಮಾಡುವುದು ಸೇರಿದಂತೆ ಹಲವಾರು ವಂಚನೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪವೂ ಇದೆ. ವಿಶ್ವಸಂಸ್ಥೆ (UN) ಮತ್ತು ಬ್ರಿಕ್ಸ್ (BRICS) ರಾಯಭಾರಿ ಎಂದು ಹೇಳಿಕೊಂಡು ಎರಡು ನಕಲಿ ವಿಸಿಟಿಂಗ್ ಕಾರ್ಡ್‌ಗಳನ್ನು ಹೊಂದಿದ್ದ. ಇದನ್ನು ಪೊಲೀಸರು ಆತನಿಂದ ವಶಪಡಿಸಿಕೊಂಡಿದ್ದಾರೆ.
“ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ”?
ಸಂಸ್ಥೆಯ ಹಳೆಯ ವಿದ್ಯಾರ್ಥಿಯೊಬ್ಬರು ಮ್ಯಾನೇಜ್‌ಮೆಂಟ್‌ಗೆ ಪತ್ರ ಬರೆದು, ಚೈತನ್ಯಾನಂದ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ವಾಯುಪಡೆಯ ಅಧಿಕಾರಿಯೊಬ್ಬರು ಇ-ಮೇಲ್ ಮೂಲಕ, ಹಲವಾರು ವಿದ್ಯಾರ್ಥಿನಿಯರಿಗೆ ಆತ ಬೆದರಿಕೆ ಹಾಕುತ್ತಿದ್ದ ಮತ್ತು ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ದೂರು ನೀಡಿದ್ದರು.
ಇದಾದ ಬಳಿಕ, ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ವಿದ್ಯಾರ್ಥಿವೇತನ ಪಡೆದ ಸ್ನಾತಕೋತ್ತರ ಮ್ಯಾನೇಜ್‌ಮೆಂಟ್ ಡಿಪ್ಲೊಮಾ ವಿದ್ಯಾರ್ಥಿನಿಯರು ಸೇರಿದಂತೆ ಕನಿಷ್ಠ 17 ಮಹಿಳೆಯರು ಪೊಲೀಸರಿಗೆ ಹೇಳಿಕೆ ನೀಡಿದ್ದರು. ವಿಷಯ ತಿಳಿದ ನಂತರ, ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯು ಚೈತನ್ಯಾನಂದನನ್ನು ಸಂಸ್ಥೆಯಿಂದ ಉಚ್ಚಾಟಿಸಿತ್ತು.
ಪ್ರಕರಣ ಮುಂದುವರಿಸದಂತೆ ಸಂತ್ರಸ್ತೆಯೊಬ್ಬರ ತಂದೆಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಆರೋಪಿಯ ಆಪ್ತ ಸಹಾಯಕ 38 ವರ್ಷದ ಹರಿ ಸಿಂಗ್ ಕೊಪ್ಕೋಟಿ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.