ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಈ ವರ್ಷ ಫೆಬ್ರವರಿ 10ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಲಿದೆ. 2024ರ ಡಿಸೆಂಬರ್ 14ರಿಂದಲೇ ಇದಕ್ಕೆ ನೋಂದಣಿ ಆರಂಭವಾಗಿ, 2025ರ ಜನವರಿ 14ರವರೆಗೆ ನಡೆದಿದೆ. ದೇಶದ ಮೂಲೆ ಮೂಲೆಗಳ ಲಕ್ಷಾಂತರ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರೊಂದಿಗೆ ಸಂವಾದ ನಡೆಸುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಈ ಬಾರಿಯ ವಿಶೇಷವೆಂದರೆ, ಪರೀಕ್ಷೆಯ ಒತ್ತಡ ನಿವಾರಣೆ, ಭವಿಷ್ಯದ ಕೋರ್ಸ್ ಗಳ ಆಯ್ಕೆ, ಸಾಮಾಜಿಕ ಒತ್ತಡವನ್ನು ಹೇಗೆ ಎದುರಿಸಬೇಕು ಎಂಬಿತ್ಯಾದಿ ಮಾರ್ಗದರ್ಶನಗಳನ್ನು ಮಕ್ಕಳಿಗೆ ನೀಡಲು ಈ ಬಾರಿ ಪ್ರಧಾನಿ ಮೋದಿಯವರೊಂದಿಗೆ ಇನ್ನೂ ಹಲವು ಪ್ರಭಾವಿ ವ್ಯಕ್ತಿಗಳು ಕೈಜೋಡಿಸಲಿದ್ದಾರೆ.

ಪರೀಕ್ಷಾ ಪೇ ಚರ್ಚಾದಲ್ಲಿ ಒಟ್ಟು 8 ಪಾಡ್ ಕಾಸ್ಟ್ ಎಪಿಸೋಡ್‌ಗಳಿದ್ದು, ಅದರಲ್ಲಿ ಸದ್ಗುರು ಜಗ್ಗಿ ವಾಸುದೇವ್, ದೀಪಿಕಾ ಪಡುಕೋಣೆ, ಮೇರಿ ಕೋಮ್, ಅವನಿ ಲೇಖಾರಾ, ರುಜುತಾ ದಿವೇಕರ್, ಸೊನಾಲಿ ಸಭರ್ವಾಲ್, ಫುಡ್ ಫಾರ್ಮರ್, ವಿಕ್ರಾಂತ್ ಮೆಸ್ಸೆ, ಭೂಮಿ ಪಡ್ನೇಕರ್, ಟೆಕ್ನಿಕಲ್ ಗುರೂಜಿ ಹಾಗೂ ರಾಧಿಕಾ ಗುಪ್ತಾ ಅವರು ಭಾಗವಹಿಸಿ ಮಕ್ಕಳಿಗೆ ಸೂಕ್ತ ಸಲಹೆಗಳನ್ನು ನೀಡಲಿದ್ದಾರೆ.
ಆಧ್ಯಾತ್ಮಿಕ ಗುರುಗಳಾದ ಸದ್ಗುರು ಅವರು ವಿದ್ಯಾರ್ಥಿಗಳಿಗೆ ಒತ್ತಡ ನಿವಾರಣೆ ಬಗ್ಗೆ ತಿಳಿಹೇಳಿದರೆ, ನಟಿ ದೀಪಿಕಾ ಪಡುಕೋಣೆ ಮಾನಸಿಕ ಆರೋಗ್ಯದ ಕುರಿತು ಮಾತನಾಡಲಿದ್ದಾರೆ. ಬಾಕ್ಸಿಂಗ್ ತಾರೆ ಮೇರಿ ಕೋಮ್ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತೆ ಅವನಿ ಲೇಖಾರಾ ಅವರು ಬದುಕಿನಲ್ಲಿ ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಗೈದ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಪ್ರಸಕ್ತ ವರ್ಷ ಸುಮಾರು 2,500 ಆಯ್ದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇವರೆಲ್ಲರಿಗೂ ಶಿಕ್ಷಣ ಸಚಿವಾಲಯವು ಪಿಪಿಸಿ ಕಿಟ್ ಒದಗಿಸಲಿದೆ. ಟಾಪ್ 10 “ಲೆಜೆಂಡರಿ ಎಕ್ಸಾಂ ವಾರಿಯರ್ಸ್”ಗಳಿಗೆ ಪ್ರಧಾನಿ ಮೋದಿಯವರ ನಿವಾಸಕ್ಕೆ ಭೇಟಿ ನೀಡುವ ವಿಶೇಷ ಅವಕಾಶವನ್ನೂ ಕಲ್ಪಿಸಲಾಗುತ್ತಿದೆ.

ಜತೆಗೆ, ಕಾರ್ಯಕ್ರಮದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವ ಅವಕಾಶವಿದ್ದು, ಅವರ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ನೇರವಾಗಿ ಉತ್ತರಿಸಲಿದ್ದಾರೆ. ಮಕ್ಕಳಿಗೆ ಒತ್ತಡರಹಿತ ಶಿಕ್ಷಣ ಒದಗಿಸುವ ಉದ್ದೇಶದಿಂದ 2018ರಿಂದಲೇ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ವರ್ಷ 8ನೇ ಆವೃತ್ತಿಯ ಕಾರ್ಯಕ್ರಮ ನಡೆಯುತ್ತಿದ್ದು, ದಾಖಲೆಯ 3.6 ಕೋಟಿ ನೋಂದಣಿಗಳಾಗಿವೆ.