ಗದಗ: ಮರ್ಯಾದಾ ಹತ್ಯೆ ಮಾಡಿದ್ದ ನಾಲ್ವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಜೋಡಿ ಕೊಲೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಜಿಲ್ಲಾ ನ್ಯಾಯಾಲಯ (Gadag District Court) ಮರಣ ದಂಡನೆ ಶಿಕ್ಷೆ (Death Sentence) ವಿಧಿಸಿ ಆದೇಶ ನೀಡಿದೆ. ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಅನ್ಯ ಜಾತಿಯ ರಮೇಶ್ ಮಾದರ ಮತ್ತು ಗಂಗಮ್ಮ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬಸ್ಥರ ವಿರೋಧ ನಡುವೆ ಗಂಗಮ್ಮ ಪ್ರೀತಿಸಿ ಅಂತರಜಾತಿ ವಿವಾಹ (Marriage) ಆಗಿದ್ದರು. ಇದಕ್ಕೆ ಅವರ ಸಂಬಂಧಿಕರು ಕೊಲೆ ಮಾಡಿದ್ದರು.
2019 ರಲ್ಲಿ ಗಂಗಮ್ಮ ಸಂಬಂಧಿಕರು ಲಕ್ಕಲಕಟ್ಟಿ ಗ್ರಾಮದಲ್ಲಿ ರಮೇಶ್ ಹಾಗೂ ಗಂಗಮ್ಮಳನ್ನು ಚಾಕುವಿನಿಂದ ಇರಿದು ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ (Case) ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿವಪ್ಪ ರಾಠೋಡ್, ರವಿಕುಮಾರ ರಾಠೋಡ್, ರಮೇಶ್ ರಾಠೋಡ್ ಹಾಗೂ ಬಸ್ ಡ್ರೈವರ್ ಆಗಿದ್ದ ಪರಶುರಾಮ್ ರಾಠೋಡ್ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಕೋರ್ಟ್ ವಿಚಾರಣೆಯಲ್ಲಿ ಆರೋಪಿಗಳು ಕೊಲೆ ಮಾಡಿರುವುದು ಸಾಬೀತಾಗಿತ್ತು. ಹೀಗಾಗಿ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ, ಆದೇಶ ಹೊರಡಿಸಿದೆ.