ಪಾಟ್ನಾ: ಇತ್ತೀಚೆಗಷ್ಟೇ ತಮ್ಮ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಸಂಬಂಧ ಕಡಿದುಕೊಳ್ಳುವ ಮಾತುಗಳನ್ನಾಡಿದ್ದ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ, ಇದೀಗ ಮತ್ತೆ ತಂದೆಯ ಬೆಂಬಲಕ್ಕೆ ನಿಂತಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಕುಟುಂಬ ಕಳೆದ ಎರಡು ದಶಕಗಳಿಂದ ವಾಸವಿದ್ದ ಪಾಟ್ನಾದ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ನಿತೀಶ್ ಕುಮಾರ್ ಸರ್ಕಾರ ಆದೇಶಿಸಿರುವುದೇ ರೋಹಿಣಿ ಅವರ ಈ ಹಠಾತ್ ಬದಲಾವಣೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ .
20 ವರ್ಷಗಳ ನಿವಾಸಕ್ಕೆ ಕುತ್ತು
ಪಾಟ್ನಾದ 10, ಸರ್ಕ್ಯುಲರ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಲಾಲು ಕುಟುಂಬ ಕಳೆದ 20 ವರ್ಷಗಳಿಂದ ವಾಸವಾಗಿತ್ತು. ಇದೀಗ ಈ ಬಂಗಲೆಯನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದ್ದು, ಲಾಲು ಪತ್ನಿ ಹಾಗೂ ಬಿಹಾರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ರಾಬ್ರಿ ದೇವಿ ಅವರಿಗೆ ಹಾರ್ಡಿಂಗ್ ರಸ್ತೆಯಲ್ಲಿರುವ ಮನೆ ಸಂಖ್ಯೆ 39ನ್ನು ಹೊಸದಾಗಿ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ನಿವಾಸದ ಎದುರಲ್ಲೇ ಇರುವ ಈ ಬಂಗಲೆಯನ್ನು 2005ರಲ್ಲಿ ರಾಬ್ರಿ ದೇವಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಅವರಿಗೆ ಹಂಚಿಕೆ ಮಾಡಲಾಗಿತ್ತು .
ನಿತೀಶ್ ವಿರುದ್ಧ ರೋಹಿಣಿ ಕಿಡಿ
ಸರ್ಕಾರದ ಈ ನಿರ್ಧಾರವನ್ನು ಲಾಲು ಪ್ರಸಾದ್ ಯಾದವ್ ಅವರಿಗೆ ಮಾಡಿದ “ಅವಮಾನ” ಎಂದು ರೋಹಿಣಿ ಆಚಾರ್ಯ ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ (ಸುಶಾಸನ್ ಬಾಬು) ವಿರುದ್ಧ ಹರಿಹಾಯ್ದಿರುವ ಅವರು, “ಕೋಟ್ಯಂತರ ಜನರ ಆರಾಧ್ಯ ದೈವವಾಗಿರುವ ಲಾಲು ಪ್ರಸಾದ್ ಯಾದವ್ ಅವರನ್ನು ಅವಮಾನಿಸುವುದೇ ಇವರ ಆದ್ಯತೆಯಾಗಿದೆ. ನೀವು ಅವರನ್ನು ಮನೆಯಿಂದ ಹೊರಹಾಕಬಹುದು, ಆದರೆ ಬಿಹಾರದ ಜನರ ಹೃದಯದಿಂದ ಹೊರಹಾಕಲು ಸಾಧ್ಯವೇ? ಅವರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿದ್ದರೂ, ಕನಿಷ್ಠ ಅವರ ರಾಜಕೀಯ ವ್ಯಕ್ತಿತ್ವಕ್ಕಾದರೂ ಗೌರವ ಕೊಡಿ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಬದಲಾದ ರಾಜಕೀಯ ಲೆಕ್ಕಾಚಾರ
ಕಳೆದ 20 ವರ್ಷಗಳಲ್ಲಿ ಬಿಹಾರದ ರಾಜಕೀಯದಲ್ಲಿ ಹಲವು ಏರಿಳಿತಗಳಾಗಿದ್ದರೂ, ನಿತೀಶ್ ಕುಮಾರ್ ಅವರು ಲಾಲು ಕುಟುಂಬವನ್ನು ಈ ಬಂಗಲೆಯಿಂದ ತೆರವುಗೊಳಿಸಲು ಮುಂದಾಗಿರಲಿಲ್ಲ. ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಪ್ರಬಲವಾಗಿ ಹೊರಹೊಮ್ಮಿದ ನಂತರ ರಾಜಕೀಯ ಸಮೀಕರಣಗಳು ಬದಲಾಗಿವೆ. ಇದರ ಭಾಗವಾಗಿಯೇ ಲಾಲು ಕುಟುಂಬಕ್ಕೆ ಈ ಬಂಗಲೆ ತೆರವುಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ .
ಒಂದಾದ ಕುಟುಂಬ
ವಿಶೇಷವೆಂದರೆ, ಕಳೆದ ವಾರವಷ್ಟೇ ರೋಹಿಣಿ ಆಚಾರ್ಯ ತಮ್ಮ ಕುಟುಂಬದ ಸದಸ್ಯರ ವರ್ತನೆಗೆ ಬೇಸತ್ತು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ತಮ್ಮ ಮೇಲೆ ಚಪ್ಪಲಿ ಎತ್ತಲಾಗಿತ್ತು ಎಂಬ ಗಂಭೀರ ಆರೋಪವನ್ನೂ ಮಾಡಿದ್ದರು. 2020ರಲ್ಲಿ ತಂದೆಗೆ ಕಿಡ್ನಿ ದಾನ ಮಾಡಿ ಪ್ರಾಣ ಉಳಿಸಿದ್ದ ರೋಹಿಣಿ, ಕುಟುಂಬದಿಂದ ದೂರವಾಗುವ ಮಾತುಗಳನ್ನಾಡಿದ್ದರು. ಆದರೆ ಇದೀಗ ತಂದೆಗೆ ಎದುರಾಗಿರುವ ಈ ಸಂಕಷ್ಟದ ಸಮಯದಲ್ಲಿ ಹಳೆಯ ಕಹಿ ಮರೆತು ಮತ್ತೆ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಲಾಲು ಕುಟುಂಬದಿಂದ ದೂರವಾಗಿರುವ ತೇಜ್ ಪ್ರತಾಪ್ ಯಾದವ್ ಅವರಿಗೂ 26 ಎಂ ಸ್ಟ್ರಾಂಡ್ ರಸ್ತೆಯಲ್ಲಿರುವ ಅವರ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ : ಪತಿ ಮನೆಯಲ್ಲಿ ಕಿರುಕುಳ | 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ನಾಲೆಗೆ ಹಾರಿ ಆತ್ಮಹತ್ಯೆ



















