ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತುಂಬಾ ಪಶ್ಚಾತ್ತಾಪ ಪಡುತ್ತಿದ್ದಾರೆ. ನಾನು ಹೋಗಿದ್ದ ವೇಳೆ ನನ್ನನ್ನು ತಬ್ಬಿಕೊಂಡು ಕಣ್ಣೀರು ಸುರಿಸುತ್ತ ಅಣ್ಣ ಮತ್ತೆ ಬರಬೇಡಿ ಎಂದಿದ್ದಾರೆ ಎಂದು ನಟ ವಿನೋದ್ ರಾಜ್ ಹೇಳಿದ್ದಾರೆ.
ಈಗಾಗಲೆ ಎರಡು ಬಾರಿ ದರ್ಶನ್ ರನ್ನು ಭೇಟಿ ಮಾಡಿರುವ ವಿನೋದ್ ರಾಜ್ ತಮ್ಮ ನೋವು ಹಂಚಿಕೊಂಡಿದ್ದಾರೆ. ದರ್ಶನ್ ಮೇಲೆ ನನಗೆ ಅನುಕಂಪವಿದೆ. ನನ್ನ ತಾಯಿ ಆರೋಗ್ಯದಲ್ಲಿ ಏರುಪೇರಾದಾಗ ಮನೆಗೆ ಬಂದು ನೋಡಿದ್ದರು. ಆಗ ಕಾಲಿಗೆ ಬಿದ್ದು ನೀನು ಹೀರೋ ಕಣನ್ನ, ನಾನು ವಿಲನ್ ಅಂದಿದ್ದರು. ದರ್ಶನ್ ಕೊಡುವ ಗೌರವ ಮತ್ತು ಬೆಲೆ ನೋಡಿದಾಗ ಈ ರೀತಿ ಘಟನೆ ಹೇಗೆ ಆಯಿತು ಎನ್ನುವುದು ಅರ್ಥವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನ್ ಕಣ್ಣು ಕೆಂಪಾಗಿದ್ದವು ನನಗೆ ತಡೆಯಲು ಆಗಲಿಲ್ಲ. ನಾನು ಅತ್ತಿದ್ದನ್ನು ಕಂಡು ಪಾಪ ದರ್ಶನ್ ಕಣ್ಣೀರಿಟ್ಟರು ಅನಿಸುತ್ತದೆ. ಅಳ್ಬೇಡ ಕಣ್ಣನ್ನ ಪರ್ವಾಗಿಲ್ಲ ಬಿಡಣ್ಣ ಎಂದು ನನಗೆ ಸಮಾಧಾನ ಮಾಡಿದ್ದರು. ಇಷ್ಟು ದಿನ ಇಲ್ಲಿ ಹೇಗಿದ್ಯಾ ಎಂದು ಕೇಳಿದೆ. ಕಲಾವಿದರಿಗೆ ಇಂತಹ ಪರಿಸ್ಥಿತಿ ಯಾವತ್ತೂ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜಕುಮಾರ್ ನಗು ಮುಖ, ದರ್ಶನ್ ರ ಪರಿಸ್ಥಿತಿ ನೋಡಿ ನೋವಾಗುತ್ತದೆ. ದರ್ಶನ್ ತುಂಬಾ ಪಶ್ಚಾತಾಪದಲ್ಲಿ ಇದ್ದಾರೆ ನಾವು ಹೋದಾಗ ನಮ್ಮನ್ನು ವಿಚಾರಿಸಿಕೊಳ್ಳುತ್ತಾರೆ ಆದರೆ ಅವರ ನೋವನ್ನು ಹೇಳಿಕೊಳ್ಳುವುದಿಲ್ಲ. ಮತ್ತೊಂದು ಸಲ ಹೋದಾಗ ಬಿಗಿಯಾಗಿ ತಬ್ಬಿಕೊಂಡು ಅಣ್ಣ ನೀನು ಮತ್ತೊಂದು ಸಲ ಜೈಲಿಗೆ ಬರಬೇಡ ಅಣ್ಣ. ನೀನು ಹೋಗಣ್ಣ ನಾನು ಹೊರಗಡೆ ಬಂದ ಮೇಲೆ ನಿನ್ನ ಹತ್ತಿರ ಬರುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಬೇಸರಿಸಿಕೊಂಡಿದ್ದಾರೆ.