ಮುಂಬೈ/ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ (ಮುಸ್ಲಿಂ ಮಹಿಳೆಯರು ಮುಖ ಮುಚ್ಚಿಕೊಳ್ಳುವ ವಸ್ತ್ರ) ಎಳೆದ ಘಟನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ಬಾಲಿವುಡ್‌ನ ಮಾಜಿ ನಟಿ, ‘ದಂಗಲ್’ ಖ್ಯಾತಿಯ ಝೈರಾ ವಾಸಿಮ್ ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳು ಬೇಷರತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
“ಅಧಿಕಾರವಿದೆ ಎಂದು ಎಲ್ಲೆ ಮೀರಬಾರದು”
ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ 25 ವರ್ಷದ ಝೈರಾ ವಾಸಿಮ್, “ಮಹಿಳೆಯ ಘನತೆ ಮತ್ತು ಮರ್ಯಾದೆ ಆಟದ ವಸ್ತುವಲ್ಲ. ಅದರಲ್ಲೂ ಸಾರ್ವಜನಿಕ ವೇದಿಕೆಯಲ್ಲಿ ಇಂತಹ ವರ್ತನೆ ಸಲ್ಲದು. ಒಬ್ಬ ಮುಸ್ಲಿಂ ಮಹಿಳೆಯಾಗಿ, ಇನ್ನೊಬ್ಬ ಮಹಿಳೆಯ ನಿಖಾಬ್ ಅನ್ನು ಅಷ್ಟು ನಿರ್ಲಕ್ಷ್ಯದಿಂದ, ನಗುತ್ತಾ ಎಳೆಯುವುದನ್ನು ನೋಡಿ ತೀವ್ರ ಆಕ್ರೋಶ ಉಂಟಾಗುತ್ತಿದೆ. ಅಧಿಕಾರವಿದೆ ಎಂಬ ಕಾರಣಕ್ಕೆ ಯಾರಿಗೂ ಇತಿಮಿತಿಗಳನ್ನು ಮೀರುವ ಹಕ್ಕಿಲ್ಲ. ನಿತೀಶ್ ಕುಮಾರ್ ಅವರು ಆ ಮಹಿಳೆಯ ಬೇಷರತ್ ಕ್ಷಮೆ ಕೇಳಬೇಕು,” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಧಾರ್ಮಿಕ ಕಾರಣಗಳನ್ನು ನೀಡಿ 2019ರಲ್ಲಿಯೇ ಬಾಲಿವುಡ್ ಚಿತ್ರರಂಗಕ್ಕೆ ಝೈರಾ ವಾಸಿಮ್ ವಿದಾಯ ಹೇಳಿದ್ದರು ಎಂಬುದು ಇಲ್ಲಿ ಗಮನಾರ್ಹ.
ಸೋಮವಾರ ಪಾಟ್ನಾದಲ್ಲಿ ನಡೆದ ಆಯುಷ್ ವೈದ್ಯರಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಹಿಜಾಬ್ ಧರಿಸಿದ್ದ ಮಹಿಳಾ ವೈದ್ಯೆಯೊಬ್ಬರಿಗೆ ಪ್ರಮಾಣಪತ್ರ ನೀಡುವ ವೇಳೆ, 74 ವರ್ಷದ ನಿತೀಶ್ ಕುಮಾರ್ ಅವರು ಮಹಿಳೆಯ ಮುಖದ ಮೇಲಿದ್ದ ಹಿಜಾಬ್ ಅನ್ನು ಏಕಾಏಕಿ ಕೆಳಕ್ಕೆ ಎಳೆದಿದ್ದರು. ಮಹಿಳೆ ಪ್ರತಿಕ್ರಿಯಿಸುವ ಮುನ್ನವೇ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈಗಾಗಲೇ ಈ ಘಟನೆಯನ್ನು ಕಾಂಗ್ರೆಸ್ ಪಕ್ಷ “ನಾಚಿಕೆಗೇಡಿನ ಸಂಗತಿ” ಎಂದು ಟೀಕಿಸಿದ್ದರೆ, ಆರ್‌ಜೆಡಿ ಮುಖ್ಯಮಂತ್ರಿಯವರ ಮಾನಸಿಕ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಇದೀಗ ಸೆಲೆಬ್ರಿಟಿ ವಲಯದಿಂದಲೂ ವಿರೋಧ ವ್ಯಕ್ತವಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ; ನ್ಯಾಷನಲ್ ಹೆರಾಲ್ಡ್ ಪ್ರಕರಣ : ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ; ಇಡಿ ಆರೋಪ ಪಟ್ಟಿ ತಿರಸ್ಕರಿಸಿದ ಕೋರ್ಟ್



















