ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಟ್ರೋಫಿಗೆ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೋವಾ ಮುತ್ತಿಕ್ಕಿದ್ದಾರೆ.
ಇಟಲಿಯ ಜಾಸ್ಮಿನ್ ಪಾವೊಲಿನಿ ಅವರನ್ನು 6-2, 2-6, 6-4 ಸೆಟ್ ಗಳಿಂದ ಸೋಲಿಸಿದ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೋವಾ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಈ ಮೂಲಕ ಕ್ರೆಜ್ಸಿಕೋವಾ ವಿಂಬಲ್ಡನ್‌ನಲ್ಲಿ ಮಹಿಳಾ ಪ್ರಶಸ್ತಿಯನ್ನು ಗೆದ್ದ ಜೆಕ್ ಗಣರಾಜ್ಯದ ನಾಲ್ಕನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಮೊದಲು ಯಾನಾ ನೊವೊಟ್ನಾ, ಪೆಟ್ರಾ ಕ್ವಿಟೋವಾ ಮತ್ತು ಕಳೆದ ವರ್ಷದ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾ ಪ್ರಶಸ್ತಿ ಗೆದ್ದಿದ್ದರು. ಕ್ರೆಜ್ಸಿಕೋವಾ ಈಗ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.

ಮೊದಲ ಗ್ರ್ಯಾಂಡ್ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಇಟಾಲಿಯನ್ ಎಂಬ ದಾಖಲೆ ನಿರ್ಮಿಸುವಲ್ಲಿ ಪಾವೊಲಿನಿ ಎಡವಿದ್ದಾರೆ. ಇದಕ್ಕೂ ಮುನ್ನ ಫ್ರೆಂಚ್ ಓಪನ್ ಫೈನಲ್ ನಲ್ಲಿ ಪಾವೊಲಿನಿ ವಿಶ್ವದ ನಂಬರ್ ಒನ್ ಆಟಗಾರ್ತಿ ಇಗಾ ಸ್ವಿಯಾಟೆಕ್ ವಿರುದ್ಧ ಸೋತಿದ್ದರು. ಈಗ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಕ್ರೆಜ್ಸಿಕೋವಾ ವಿರುದ್ಧ ಕಠಿಣ ಹೋರಾಟ ನೀಡಿ ಸೋತಿದ್ದಾರೆ. ಆದರೂ ಪಾವೊಲಿನಿ ವಿಂಬಲ್ಡನ್ ಫೈನಲ್ ತಲುಪಿದ ಮೊದಲ ಇಟಾಲಿಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಒಂದು ಗಂಟೆ 56 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಕ್ರೆಜ್ಸಿಕೋವಾ ಮೊದಲ ಸೆಟ್ ಗೆದ್ದರು. ನಂತರ ಜಾಸ್ಮಿನ್ ಬಲವಾದ ಪುನರಾಗಮನ ಮಾಡಿ ಪಂದ್ಯವನ್ನು ನಿರ್ಣಾಯಕ ಸೆಟ್ ಗೆ ಕೊಂಡೊಯ್ದರು. ಮೂರನೇ ಹಾಗೂ ಕೊನೆಯ ಸೆಟ್‌ನಲ್ಲಿ ಕ್ರೆಜ್ಸಿಕೋವಾ ದಿಟ್ಟ ಪ್ರದರ್ಶನ ನೀಡಿ, ಟ್ರೋಫಿಗೆ ಮುತ್ತಿಕ್ಕಿದರು. ಇದಕ್ಕೂ ಮುನ್ನ ಅವರು 2021ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದರು.