ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ‘ಮೋಂಥಾ’ ಚಂಡಮಾರುತವಾಗಿ ಬದಲಾಗಿದ್ದು, ಇಂದು ರಾತ್ರಿ ಆಂಧ್ರಪ್ರದೇಶದ ಕಾಕಿನಾಡ ಬಳಿ ಅಪ್ಪಳಿಸುವ ಸಾಧ್ಯತೆಯಿದೆ. ತೀವ್ರ ಚಂಡಮಾರುತವಾಗಿ ಮಾರ್ಪಟ್ಟಿರುವ ಮೋಂಥಾ, ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಈಗಾಗಲೇ ಎರಡೂ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಚಂಡಮಾರುತವು ಮಚಿಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಪ್ರವಾಹ ಮತ್ತು ಚಂಡಮಾರುತದ ಹಾನಿಯನ್ನು ಎದುರಿಸಲು ಆಂಧ್ರಪ್ರದೇಶಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಪ್ರವಾಹದ ಆತಂಕ
ಚಂಡಮಾರುತದ ಪ್ರಭಾವದಿಂದಾಗಿ ಚಿತ್ತೂರು, ತಿರುಪತಿ ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿತ್ತೂರು ಜಿಲ್ಲೆಯ ನಾಗರಿ ಕ್ಷೇತ್ರದಲ್ಲಿ ಕುಶಸ್ಥಲಿ ನದಿ ಉಕ್ಕಿ ಹರಿದ ಪರಿಣಾಮ ಹಲವು ಪ್ರಮುಖ ರಸ್ತೆಗಳು ಬಂದ್ ಆಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಕೃಷ್ಣಾಪುರಂ ಜಲಾಶಯದಿಂದ 1,000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಕಾಕಿನಾಡ ಜಿಲ್ಲೆಯ ಉಪ್ಪಡದಲ್ಲಿ ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ಕರಾವಳಿ ತೀರದ ಉಪ್ಪಡ, ಸುಬ್ಬಂಪೇಟೆ, ಮಾಯಾಪಟ್ನಂ ಮತ್ತು ಸೂರಡಪೇಟೆ ಗ್ರಾಮಗಳ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ತಿರುಪತಿಯ 75 ಕಿ.ಮೀ. ಉದ್ದದ ಕರಾವಳಿ ತೀರದ ಐದು ಕರಾವಳಿ ಮಂಡಲಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ.
ಒಡಿಶಾದಲ್ಲಿ ಕಟ್ಟೆಚ್ಚರ
ಚಂಡಮಾರುತವು ಆಂಧ್ರದಲ್ಲಿ ಭೂಸ್ಪರ್ಶ ಮಾಡಿದರೂ, ಒಡಿಶಾದ ಮೇಲೂ ತೀವ್ರ ಪರಿಣಾಮ ಬೀರಲಿದೆ. ರಾಜ್ಯದ 8 ದಕ್ಷಿಣ ಜಿಲ್ಲೆಗಳಾದ ಮಲ್ಕನ್‌ಗಿರಿ, ಕೋರಾಪುಟ್, ನಬರಂಗ್‌ಪುರ, ರಾಯಗಡ, ಗಜಪತಿ, ಗಂಜಾಂ, ಕಲಹಂಡಿ ಮತ್ತು ಕಂಧಮಾಲ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. “ಶೂನ್ಯ ಸಾವು-ನೋವು ನಮ್ಮ ಗುರಿ” ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವರು ಹೇಳಿದ್ದು, 32,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಎನ್‌ಡಿಆರ್‌ಎಫ್, ಒಡಿಆರ್‌ಎಎಫ್ ಮತ್ತು ಅಗ್ನಿಶಾಮಕ ಸೇವೆಗಳ 140 ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲೂ ಮಳೆ
ಪಶ್ಚಿಮ ಬಂಗಾಳದ ದಕ್ಷಿಣ ಭಾಗಗಳಾದ ಕೋಲ್ಕತ್ತಾ, ಹೌರಾ, ಹೂಗ್ಲಿ, ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ರಾಣಿಪೇಟೆ ಜಿಲ್ಲೆಗಳಲ್ಲಿ ಸೋಮವಾರದಿಂದಲೇ ಭಾರೀ ಮಳೆಯಾಗುತ್ತಿದೆ.
ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಚಂಡಮಾರುತವು ವಿಮಾನ ಮತ್ತು ರೈಲು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ತಮಿಳುನಾಡಿನಲ್ಲಿ ಹಲವು ವಿಮಾನಗಳ ಸಂಚಾರವನ್ನು ರದ್ದು ಪಡಿಸಲಾಗಿದೆ. ರೈಲ್ವೆ ಇಲಾಖೆಯು ಹಲವು ರೈಲು ಸೇವೆಗಳನ್ನು ರದ್ದುಗೊಳಿಸಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಡಿಸಿಎಂ ಡಿಕೆಶಿ ಮನೆಗೆ ತೇಜಸ್ವಿ ಸೂರ್ಯ ಭೇಟಿ!



















