ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ನಲ್ಲಿ ನಡೆಸಿದ ಕ್ಲಿನಿಕಲ್ ಅಧ್ಯಯನಗಳ ಸರಣಿಯು ಕೋವಿಡ್-19 ಸೋಂಕು ಮತ್ತು ಕೋವಿಡ್ ಲಸಿಕೆ ಎರಡಕ್ಕೂ ಸಂಬಂಧಿಸಿದ ಗಮನಾರ್ಹ ನರವೈಜ್ಞಾನಿಕ ಸಮಸ್ಯೆಗಳನ್ನು ಬಹಿರಂಗಪಡಿಸಿದೆ.

NIMHANS ನ ನರವಿಜ್ಞಾನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಎಂ ಅವರ ನೇತೃತ್ವದಲ್ಲಿ, ಈ ಅಧ್ಯಯನ ನಡೆದಿದೆ. ಸಾಂಕ್ರಾಮಿಕ ರೋಗದ ಮೊದಲ ಅಲೆ ಮತ್ತು ನಂತರದ ವ್ಯಾಕ್ಸಿನೇಷನ್ ಅಭಿಯಾನ ಎರಡನ್ನೂ ಒಳಗೊಂಡು ಅಧ್ಯಯನ ನಡೆಸಲಾಗಿದೆ. ವೈರಸ್ ಮತ್ತು ಅದರ ಪ್ರತಿಕ್ರಿಯೆಯು ಬಾಹ್ಯ ನರಮಂಡಲದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುವುದರ ಬಗ್ಗೆ ವಿವರಿಸುತ್ತದೆ.
ಮಾರ್ಚ್ ಮತ್ತು ಸೆಪ್ಟೆಂಬರ್ 2020 ರ ನಡುವೆ, ನರವೈಜ್ಞಾನಿಕ ಕಾಯಿಲೆಗಳಿಂದ ಬಳಲುತ್ತಿರುವ 3,200 ರೋಗಿಗಳ ಆಸ್ಪತ್ರೆ ದಾಖಲೆಗಳನ್ನು NIMHANS ಪರಿಶೀಲಿಸಿದೆ. ಅವರಲ್ಲಿ, 120 ರೋಗಿಗಳು (3.75%) ನರವೈಜ್ಞಾನಿಕ ಅಸ್ವಸ್ಥತೆಗಳೊಂದಿಗೆ ಕೋವಿಡ್ ಸೋಂಕನ್ನು ದೃಢಪಡಿಸಿದ್ದಾರೆ. ಈ ರೋಗಿಗಳ ಸರಾಸರಿ ವಯಸ್ಸು 49 ವರ್ಷಗಳು, 3 ರಿಂದ 84 ವರ್ಷಗಳವರೆಗೆ ಇರುತ್ತದೆ.
ಕೋವಿಡ್ ನಿಂದಾಗಿ ಹೈಪೋಕ್ಸಿಯಾ, ಥ್ರಂಬೋಟಿಕ್ ತೊಡಕುಗಳು ಅಥವಾ ಸ್ವಯಂ ನಿರೋಧಕ ಕಾರ್ಯವಿಧಾನಗಳ ಮೂಲಕ ನರವೈಜ್ಞಾನಿಕ ಲಕ್ಷಣಗಳನ್ನು ಉಂಟುಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.