ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆಗೆ ಇಡೀ ವಿಶ್ವವೇ ಕಾಯುತ್ತಿದೆ. ಈ ಮಧ್ಯೆ ಫ್ರಾನ್ಸ್ ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ.
ಫ್ರಾನ್ಸ್ ನ ಹೈಸ್ಪೀಡ್ ರೈಲು ಮಾರ್ಗಗಳಿಗೆ ಕಿಡಿಕೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಮೂಲಕ ರೈಲು ಪ್ರಯಾಣಕ್ಕೆ ಅಡಚಣೆ ಉಂಟಾಗಿದೆ. ಪರಿಣಾಮ 8 ಲಕ್ಷಕ್ಕೂ ಅಧಿಕ ರೈಲು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ವಿಶ್ವದ ಮಹಾ ಕ್ರೀಡಾಕೂಟ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಇಂತಹ ಕೃತ್ಯ ನಡೆದಿರುವುದು ಭದ್ರತಾ ಲೋಪಕ್ಕೆ ಹಿಡಿದಿರುವ ಕೈಗನ್ನಡಿಯಾಗಿದ್ದು ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ಈ ದಾಳಿ ಒಲಿಂಪಿಕ್ಸ್ ಕ್ರೀಡಾಕೂಟ ಗುರಿಯಾಗಿಸಿಕೊಂಡು ನಡೆದಿರುವ ದಾಳಿ ಎಂದು ವರದಿಯಾಗಿದೆ. ಇದರಿಂದಾಗಿ ಅಲ್ಲಿನ ರೈಲು ಸೇವೆಗಳಲ್ಲಿ ಅಸ್ತವ್ಯಸ್ಥ ಉಂಟಾಗಿದೆ. ದಾಳಿಯಿಂದ ಸುಮಾರು 8 ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗಿದೆ.
ದಾಳಿಯಿಂದ ಫ್ರಾನ್ಸ್‌ನ ಪಶ್ಚಿಮ, ಉತ್ತರ ಮತ್ತು ಪೂರ್ವ ಪ್ರದೇಶಗಳ ರೈಲು ಮಾರ್ಗಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ದೇಶೀಯ ರೈಲುಗಳಷ್ಟೇ ಅಲ್ಲ, ಚಾನೆಲ್ ಟನಲ್ ಮೂಲಕ ನೆರೆಯ ದೇಶಗಳಾದ ಬೆಲ್ಜಿಯಂ ಮತ್ತು ಲಂಡನ್ ಗೆ ತೆರಳುವ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ. ಬೆಂಕಿಯಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಕನಿಷ್ಠ ಭಾನುವಾರದವರೆಗೆ ಸಮಯ ಬೇಕಾಗಬಹುದು ಎಂದು ವರದಿಯಾಗಿದೆ.
ಈ ಕುರಿತು ಈಗಾಗಲೇ ಫ್ರೆಂಚ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ನಡೆದ ಈ ಘಟನೆಯನ್ನು ಫ್ರೆಂಚ್ ಸರ್ಕಾರಿ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಫ್ರಾನ್ಸ್‌ನ ಕ್ರೀಡಾ ಸಚಿವರು ಈ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದು, ಕ್ರೀಡೆಯನ್ನು ಗುರಿಯಾಗಿಸುವುದು ಫ್ರಾನ್ಸ್ ನ್ನೇ ಗುರಿಯಾಗಿಸುವುದಕ್ಕೆ ಸಮ ಎಂದಿದ್ದಾರೆ. ಉದ್ಘಾಟನಾ ಸಮಾರಂಭದ ಸಂಪೂರ್ಣ ಕಾರ್ಯಕ್ರಮವು ಐಫೆಲ್ ಟವರ್ ಮತ್ತು ಸೀನ್ ನದಿಯಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ 10,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಪ್ರೇಕ್ಷಕರು ಮತ್ತು ಅತಿಥಿಗಳು ಆಗಮಿಸಲಿದ್ದಾರೆ.