ಬೆಳಗಾವಿ: ಜಿಲ್ಲಾ ರಾಜಕಾರಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಕ್ರೆಡಿಟ್ ವಾರ್ ಶುರುವಾಗಿದೆ. ಇದು ಬೆಂಬಲಿಗರ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಈ ವಾರ್ ಕಾಂಗ್ರೆಸ್ ಹೈಕಮಾಂಡ್ ಗೆ ಈಗ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲಾ ಅಭಿವದ್ಧಿ, ನಾಯಕತ್ವ, ಕಾಂಗ್ರೆಸ್ ಕಚೇರಿ ಸೇರಿದಂತೆ ಕೆಲವು ವಿಚಾರದಲ್ಲಿ ಇಬ್ಬರು ನಾಯಕರ ಮಧ್ಯೆ ಕ್ರೆಡಿಟ್ ಶುರುವಾಗಿದೆ. ಈ ವಾರ್ ಇಂದು ಬೆಳಗಾವಿಗೆ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸಭೆಯಲ್ಲೂ ಸ್ಫೋಟಗೊಂಡಿತ್ತು. ಸಭೆಯಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಸೃಷ್ಟಿಸಿದ್ದಾರೆ.
ನಗರದಲ್ಲಿ ಗಾಂಧಿ ಭಾರತ ಸಮಾವೇಶ ಹಿನ್ನೆಲೆ ಜಿಲ್ಲಾ ಮುಖಂಡರ ಜೊತೆಗೆ ರಣದೀಪ್ ಸಿಂಗ್ ಸುರ್ಜೇವಾಲ ಪೂರ್ವಭಾವಿ ಸಭೆ ನಡೆಸಿದ್ದರು. ಈ ವೇಳೆ ಸಮಾವೇಶದ ಕುರಿತು ಈಗಾಗಲೇ ಸಭೆ ಮಾಡಲಾಗಿದೆ ಎಂದು ಸುರ್ಜೇವಾಲ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ಯಕರ್ತರು, ಯಾವುದೇ ಸಭೆಯನ್ನು ಇದುವರೆಗೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕಾಂಗ್ರೆಸ್ ಕಚೇರಿ ನಿರ್ಮಾಣದ ಕುರಿತು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಸತೀಶ್ ಜಾರಕಿಹೊಳಿ ಕಚೇರಿಯನ್ನು ಈಗ ನೋಡಿಕೊಳ್ಳುತ್ತಿದ್ದಾರೆ ಎಂದು ಕಾರ್ಯಕರ್ತರು ಹೇಳಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸುರ್ಜೇವಾಲ, ನೀವು ಸತೀಶ್ ಜಾರಕಿಹೊಳಿ ಅವರನ್ನ ಖುಷಿ ಪಡಿಸಲು ಮಾತನಾಡುತ್ತಿದ್ದೀರಿ ಎಂದರು. ಆಗ ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಜನರು ಅವರ ಸಲುವಾಗಿ ಬಂದಿದ್ದಾರೆ ಎಂದು ಹೇಳಿದರು. ಆಗ ಸುರ್ಜೇವಾಲ ಮೌನವಹಿಸಿದರು. ಈ ಗದ್ದಲ ನಡೆದಾಗ ಸಚಿವ ಸತೀಶ ಜಾರಕಿಹೊಳಿ ವೇದಿಕೆಯ ಮೇಲೆಯೇ ಇದ್ದರು. ಆದರೂ ಮೌನವಾಗಿ ಕುಳಿತಿದ್ದರು. ಆ ನಂತರ ಸುರ್ಜೇವಾಲ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಯಾರಿಗೆ ಏನು ಅವಶ್ಯಕತೆ ಇದೆ. ವಾಹನ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿ, ಪರಿಸ್ಥಿತಿ ತಿಳಿಗೊಳಿಸಿದರು. ಸತೀಶ್ ಜಾರಕಿಹೊಳಿ ಮಾತ್ರ ಮೌನವಾಗಿಯೇ ಇದ್ದರು.