ಪಾಟ್ನಾ: ಬಿಹಾರದಲ್ಲಿ ಚುನಾವಣಾ ಕಾವು ಏರುತ್ತಿರುವಂತೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ವಿರುದ್ಧ ಬಳಸಲಾದ ನಿಂದನಾತ್ಮಕ ಭಾಷೆಯನ್ನು ಖಂಡಿಸಿ ಆಡಳಿತಾರೂಢ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯು ಶುಕ್ರವಾರ ಹಿಂಸಾಚಾರಕ್ಕೆ ತಿರುಗಿದೆ. ಪಾಟ್ನಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ನಡೆದಿದ್ದು, ಇದರ ವಿಡಿಯೋಗಳು ವೈರಲ್ ಆಗಿವೆ.
ಬಿಹಾರದ ದರ್ಭಂಗಾದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ‘ಮತದಾರ ಅಧಿಕಾರ ಯಾತ್ರೆ’ಯಲ್ಲಿ ಕಾಂಗ್ರೆಸ್ ಧ್ವಜ ಹಿಡಿದಿದ್ದ ವ್ಯಕ್ತಿಯೊಬ್ಬ ವೇದಿಕೆಯಿಂದ ಪ್ರಧಾನಿ ಮೋದಿ ವಿರುದ್ಧ ಹಿಂದಿಯಲ್ಲಿ ನಿಂದನಾತ್ಮಕ ಪದಗಳನ್ನು ಬಳಸಿದ್ದ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಸಂಬಂಧ ಬಿಜೆಪಿ ದೂರು ದಾಖಲಿಸಿದ್ದು, ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತ್ತು.
ಈ ನಿಂದನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಾಟ್ನಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜಗಳನ್ನು ಬಳಸಿ ಪರಸ್ಪರ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ವಿವಾದದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ರಾಜಕೀಯವು ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ. ಬಡ ತಾಯಿಯ ಮಗ ಪ್ರಧಾನಿಯಾಗಿ 11 ವರ್ಷಗಳಿಂದ ದೇಶವನ್ನು ಮುನ್ನಡೆಸುತ್ತಿರುವುದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ” ಎಂದು ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮತ್ತು ಅವರ ತಾಯಿಯ ವಿರುದ್ಧ ಬಳಸಿದ ನಿಂದನೆಯು ಅಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದೆ. ರಾಹುಲ್ ಗಾಂಧಿ ಮತ್ತು ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಒತ್ತಾಯಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯಿಸಿ, “ದರ್ಭಂಗಾದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಕಾರ್ಯಕ್ರಮದಲ್ಲಿ ಪ್ರಧಾನಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಅಸಭ್ಯ ಭಾಷೆ ಬಳಸಿರುವುದು ಅತ್ಯಂತ ಅನುಚಿತ. ನಾನು ಇದನ್ನು ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಇಂತಹ ಅಪ್ರಸ್ತುತ ವಿಷಯಗಳನ್ನು ಎತ್ತುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿಯವರನ್ನು ನಿಂದಿಸಿದ ವ್ಯಕ್ತಿಯನ್ನು ದರ್ಭಂಗಾ ಪೊಲೀಸರು ಬಂಧಿಸಿದ್ದಾರೆ. ಸಿಮ್ರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈ ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧವೂ ಪಾಟ್ನಾದಲ್ಲಿ ಪ್ರಕರಣ ದಾಖಲಾಗಿದೆ.