ಪಾಕಿಸ್ತಾನದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಬುಡಕಟ್ಟು ಸಮುದಾಯಗಳ ನಡುವೆ ಭಯಾನಕ ಘರ್ಷಣೆ ನಡೆಯುತ್ತಿದ್ದು, 30 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, 145ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಈ ಘಟನೆ ಪಾಕಿಸ್ತಾನದ ಕುರ್ರಮ್ ಜಿಲ್ಲೆಯಲ್ಲಿ ನಡೆದಿದೆ. ಅಲ್ಲಿನ ಬೊಷೆರಾ ಎಂಬ ಗ್ರಾಮದಲ್ಲಿ ಕಳೆದ 5 ದಿನಗಳಿಂದ ಈ ಘರ್ಷಣೆ ನಡೆಯುತ್ತಿದೆ. ಈ ಗ್ರಾಮದಿಂದ ಶುರುವಾದ ದ್ವೇಷ ಜಗಳ ಪಕ್ಕದ ಗ್ರಾಮಗಳಿಗೂ ವ್ಯಾಪಿಸಿದೆ. ಘರ್ಷಣೆ ಸಂದರ್ಭದಲ್ಲಿ ಭಾರಿ ಶಸ್ತ್ರಾಸ್ತ್ರಗಳು, ರಾಕೆಟ್ ಲಾಂಚರ್ ಗಳು, ಶೆಲ್ ಗಳನ್ನು ಬಳಸಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಹೀಗಾಗಿ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಶಿಯಾ ಹಾಗೂ ಸುನ್ನಿ ಬುಡಕಟ್ಟು ಜನರ ನಡುವೆ ನಡೆಯುತ್ತಿರುವ ಘರ್ಷಣೆ ಇದಾಗಿದೆ. ಮಿಲಿಟರಿ, ಪೊಲೀಸರ ಸಹಕಾರದಿಂದ ಈ ಘರ್ಷಣೆ ತಡೆಯಲಾಗಿದೆ. ಇನ್ನೂ ಕೆಲವೆಡೆ ಹಿಂಸಾಚಾರ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಲಭೆ ಪೀಡಿತ ಪ್ರದೇಶಗಳಿಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.