ಮಲೆ ಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಹುಲಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ದೊಡ್ಡ ಆಕ್ರೋಶ ಕೇಳಿ ಬರುತ್ತಿದೆ.
ಈಗ ಅರಣ್ಯ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ತಲಘಟ್ಟಪುರ ನಿವಾಸಿ ಶ್ರೀಧರ್ ಜಯಪಾಲನ್ ಎಂಬುವವರು ದೂರು ಸಲ್ಲಿಸಿದ್ದಾರೆ. ಹುಲಿ ಮತ್ತು ಮರಿಗಳ ಹತ್ಯೆ ಸಂಬಂಧ ಅರಣ್ಯ ಇಲಾಖೆಯ ಭ್ರಷ್ಟಾಚಾರ, ಅಪರಾಧಿಕ ಕ್ರಮದ ತನಿಖೆಗೆ ಕೋರಿ ದೂರು ಸಲ್ಲಿಕೆಯಾಗಿದೆ.
ಮಲೆ ಮಹದೇಶ್ವರ ಬೆಟ್ಟ ಪ್ರಾಜೆಕ್ಟ್ ಟೈಗರ್ ರಕ್ಷಿತ ಪ್ರದೇಶ. ಅರಣ್ಯ ಇಲಾಖೆಯ ಘೋರ ವೈಫಲ್ಯ, ಭ್ರಷ್ಟಾಚಾರದಿಂದ ಆಗಿರುವ ಘಟನೆಯಾಗಿದೆ. ಅರಣ್ಯ ಇಲಾಖೆಯು ಪೆಟ್ರೋಲಿಂಗ್, ಗೂಢಚಾರಿ ವ್ಯವಸ್ಥೆ, ವಾಸಸ್ಥಾನ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪೆಟ್ರೋಲಿಂಗ್, ವನ್ಯಜೀವಿ ರಕ್ಷಣೆ ಬಿಟ್ಟು, ರಸ್ತೆ ಚೆಕ್ ಪೋಸ್ಟ್ ಗಳಲ್ಲಿ ಹಣಕ್ಕಾಗಿ ವಾಹನಗಳ ಮೇಲೆ ಗಮನ ಇಟ್ಟಿದ್ದಾರೆ. ಮನುಷ್ಯ- ವನ್ಯಜೀವಿ ಘರ್ಷಣೆ ಬಾಧಿತರಿಗೆ ಪರಿಹಾರದಲ್ಲಿ ಲಂಚಗುಳಿತನ ದೊಡ್ಡ ಪಿಡುಗಾಗಿದೆ. ಸ್ಥಳೀಯರೊಂದಿಗೆ ಸಂವಾದದ ಕೊರತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹುಲಿ ರಕ್ಷಣೆ, ಸಹಬಾಳ್ವೆ ಬಗ್ಗೆ ಅರಿವು ಮೂಡಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಅಧಿಕಾರಿಗಳ ಕರ್ತವ್ಯ ಲೋಪವಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕು. ಕೂಡಲೇ ಸಿಸಿಎಫ್, ಸಿಎಫ್, ಡಿಸಿಎಫ್, ಆರ್ ಎಫ್ಓ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ದೂರಿನಲ್ಲಿ ಮನವಿ ಮಾಡಲಾಗಿದೆ.