ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ನೇರ ಸವಾಲು ಹಾಕಿದ್ದಾರೆ. ಧೈರ್ಯವಿದ್ದರೆ ಅಯೋಧ್ಯೆ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸಿ, ನೀವು ಅಲ್ಲಿಂದ ನಾಮಪತ್ರ ಸಲ್ಲಿಸಿದರೆ ನಾನೂ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂದು ಯೋಗಿ ಹೇಳಿದ್ದಾರೆ.
ಗೋರಖ್‌ಪುರ ಜಿಲ್ಲೆಯ ಕ್ಯಾಂಪಿಯರ್‌ಗಂಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಖಿಲೇಶ್ ಯಾದವ್ ಅವರ ಸವಾಲಿಗೆ ತಿರುಗೇಟು ನೀಡಿದರು. ಧೈರ್ಯವಿದ್ದರೆ ನೇರವಾಗಿ ಮುಖಾಮುಖಿ ಚುನಾವಣಾ ಕಣಕ್ಕೆ ಬರಲಿ ಎಂದಿದ್ದಾರೆ. ಅಖಿಲೇಶ್ ಯಾದವ್ ಅವರಿಗೆ ನೇರ ಚುನಾವಣಾ ಸ್ಪರ್ಧೆ ಎದುರಿಸುವ ಧೈರ್ಯವಿಲ್ಲ ಮತ್ತು ದುರ್ಬಲರು ಹಿಂದಿನಿಂದ ದಾಳಿ ಮಾಡುವ ತಂತ್ರವನ್ನು ಮಾತ್ರ ಅವರು ಅನುಸರಿಸುತ್ತಾರೆ ಎಂದು ಕುಟುಕಿದ್ದಾರೆ.
ಸಮಾಜವಾದಿ ಪಕ್ಷದ ನಾಯಕರು ಮಾಫಿಯಾ ಶಕ್ತಿಗಳನ್ನು ಅವಲಂಬಿಸಿದ್ದಾರೆ ಹಾಗೂ ಯುವಕರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಯೋಗಿ ಆರೋಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರು ಮತ್ತು ವ್ಯಾಪಾರಿಗಳ ಸುರಕ್ಷತೆಯನ್ನೂ ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
















