ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್‌ಸಿಂಗ್ ಸುರ್ಜೇವಾಲ ಅವರೊಂದಿಗೆ ಸಿಎಂ, ಡಿಸಿಎಂ ಗುರುವಾರ ನಡೆಸಲಿರುವ ಸಭೆ ಸಾಕಷ್ಟು ಕುತೂಹಲ ಕೆರಳಿಸಿದೆ. ಹೀಗಾಗಿ ಎಲ್ಲರ ಚಿತ್ತ ಈ ಸಭೆಯತ್ತ ನೆಟ್ಟ
ಕೇಂದ್ರ ಸಚಿವರ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ದೆಹಲಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇನ್ನೆರಡು ದಿನ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ. ಇನ್ನು ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಭೇಟಿಗಾಗಿ ಬುಧವಾರ ದಿಲ್ಲಿಗೆ ಪ್ರಯಾಣಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಎರಡು ದಿನಗಳ ಕಾಲ ದಿಲ್ಲೆಯಲ್ಲೇ ತಂಗಲಿದ್ದಾರೆ. ವಿದೇಶ ಪ್ರವಾಸದಿಂದ ವಾಪಸಾಗಲಿರುವ ರಾಹುಲ್ ಗಾಂಧಿ ಅವರ ಜತೆ ಸಿಎಂ- ಡಿಸಿಎಂ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಜತೆ ಗುರುವಾರ ಸಭೆ ನಡೆಯುವುದು ಖಚಿತವಾಗಿದೆ.
ಈ ಸಭೆಯಲ್ಲಿ ವಿಧಾನ ಪರಿಷತ್ತಿಗೆ ನಾಲ್ವರ ನಾಮನಿರ್ದೇಶನ, ನಿಗಮ, ಮಂಡಳಿಗಳಿಗೆ ನಿರ್ದೇಶಕರ ನೇಮಕ ಹಾಗೂ ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಹುಲ್ ಸಭೆಗೂ ಮುನ್ನ ಸಿಎಂ, ಡಿಸಿಎಂ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ.ವೇಣುಗೋಪಾಲ್ ಅವರನ್ನು ಪ್ರತ್ಯೇಕ ಇಲ್ಲವೇ ಒಟ್ಟಿಗೆ ಭೇಟಿಯಾಗಿ ನಾಮನಿರ್ದೇಶನ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಿದ್ದಾರೆ.



















