ಬೆಂಗಳೂರು : ಮಾರ್ಚ್ ತಿಂಗಳ ಐಸಿಸಿ ‘ಪ್ಲೇಯರ್ ಆಫ್ ದ ಮಂತ್’ (ತಿಂಗಳ ಶ್ರೇಷ್ಠ ಆಟಗಾರ) ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಆಟಗಾರರ ಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದ ಭರವಸೆಯ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ವೇಗದ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾ ಅವರು ಈ ಬಾರಿಯ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಇವರೊಂದಿಗೆ ದಕ್ಷಿಣ ಆಫ್ರಿಕಾದ ಉದಯೋನ್ಮುಖ ಬ್ಯಾಟಿಂಗ್ ಪ್ರತಿಭೆ ಕಾನರ್ ಎಸ್ತರ್ಹೈಜೆನ್ ಕೂಡ ಈ ಪ್ರಶಸ್ತಿಯ ರೇಸ್‌ನಲ್ಲಿದ್ದು, ಪ್ರಶಸ್ತಿಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಕಾನರ್ ಗಮನ ಸೆಳೆದಿದ್ದಾರೆ.
ಮಾರ್ಚ್ ತಿಂಗಳು ಸಂಪೂರ್ಣವಾಗಿ ಸಂಜು ಸ್ಯಾಮ್ಸನ್ ಅವರದ್ದೇ ಆಗಿತ್ತು ಎಂದರೆ ತಪ್ಪಾಗಲಾರದು.
ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದರೂ, ನಿರ್ಣಾಯಕ ಘಟ್ಟದಲ್ಲಿ ತಂಡಕ್ಕೆ ಮರಳಿದ ಸಂಜು ಸ್ಯಾಮ್ಸನ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಟೂರ್ನಿಯ ದಿಕ್ಕನ್ನೇ ಬದಲಿಸಿದರು. ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸುವ ಮೂಲಕ ಭಾರತ ತಂಡವನ್ನು ನಾಕೌಟ್ ಹಂತಕ್ಕೆ ಕೊಂಡೊಯ್ದರು.
ಆ ಬಳಿಕ ಅವರ ಬ್ಯಾಟ್‌ನಿಂದ ರನ್‌ಗಳ ಸುರಿಮಳೆಯೇ ಹರಿಯಿತು. ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಹಾಗೂ ಅಹಮದಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸತತವಾಗಿ 89 ರನ್‌ಗಳ ಎರಡು ಸ್ಫೋಟಕ ಇನಿಂಗ್ಸ್‌ಗಳನ್ನು ಆಡುವ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಒತ್ತಡದ ಪರಿಸ್ಥಿತಿಯಲ್ಲೂ ನಿರ್ಭೀತಿಯಿಂದ ಬ್ಯಾಟ್ ಬೀಸಿದ ಸ್ಯಾಮ್ಸನ್ ಅವರ ಸ್ಥಿರ ಪ್ರದರ್ಶನವು ಭಾರತಕ್ಕೆ ಮತ್ತೊಂದು ವಿಶ್ವಕಪ್ ಕಿರೀಟವನ್ನು ತಂದುಕೊಟ್ಟಿತಲ್ಲದೆ, ಟೂರ್ನಿಯ ಶ್ರೇಷ್ಠ ಆಟಗಾರ (ಪ್ಲೇಯರ್ ಆಫ್ ದ ಟೂರ್ನಮೆಂಟ್) ಪ್ರಶಸ್ತಿಯನ್ನೂ ಅವರಿಗೆ ಒಲಿದುಬರುವಂತೆ ಮಾಡಿತು.
ಚೆಂಡಿನ ಮೂಲಕ ಪಾರುಪತ್ಯ
ಮತ್ತೊಂದೆಡೆ, ಭಾರತ ತಂಡದ ವೇಗದ ಬೌಲಿಂಗ್ ವಿಭಾಗದ ಆಧಾರಸ್ತಂಭ ಜಸ್ಪ್ರೀತ್ ಬುಮ್ರಾ ಅವರು ಚೆಂಡಿನ ಮೂಲಕ ತಮ್ಮ ಪಾರುಪತ್ಯ ಮೆರೆದಿದ್ದಾರೆ. ಸದಾ ಒತ್ತಡದ ಸಂದರ್ಭಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುವ ಬುಮ್ರಾ, ಈ ಬಾರಿಯೂ ಭಾರತದ ಪಾಲಿನ ಟ್ರಬಲ್ ಶೂಟರ್ ಆಗಿ ಹೊರಹೊಮ್ಮಿದರು. ನಿರ್ಣಾಯಕ ಪಂದ್ಯಗಳಲ್ಲಿ ಅವರು 12.00ರ ಸರಾಸರಿ ಹಾಗೂ 7.00ರ ಅತ್ಯುತ್ತಮ ಎಕಾನಮಿಯೊಂದಿಗೆ 7 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಂಗೆಡಿಸಿದರು. ಅದರಲ್ಲೂ ವಿಶೇಷವಾಗಿ ಫೈನಲ್ ಪಂದ್ಯದಲ್ಲಿ ಕೇವಲ 15 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಬುಮ್ರಾ ಅವರ ಈ ಮಾರಕ ದಾಳಿಯೇ ಭಾರತದ ಗೆಲುವನ್ನು ಸುಲಭಗೊಳಿಸಿತು ಎಂದರೆ ಅತಿಶಯೋಕ್ತಿಯಲ್ಲ.
ಭಾರತೀಯ ಆಟಗಾರರ ಈ ದರ್ಬಾರಿನ ನಡುವೆ ದಕ್ಷಿಣ ಆಫ್ರಿಕಾದ ಯುವ ಆಟಗಾರ ಕಾನರ್ ಎಸ್ತರ್ಹೈಜೆನ್ ಕೂಡ ತಮ್ಮ ಅಸಾಧಾರಣ ಪ್ರದರ್ಶನದ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಆಕ್ರಮಣಕಾರಿ ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕಾನರ್, ಐದು ಪಂದ್ಯಗಳಲ್ಲಿ 50ರ ಸರಾಸರಿ ಹಾಗೂ 145.98ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 200 ರನ್ ಚಚ್ಚಿದ್ದಾರೆ. ಇವರ ಈ ಸ್ಫೋಟಕ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ನ್ಯೂಜಿಲೆಂಡ್ ನೆಲದಲ್ಲಿ 3-2 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತು.
ಅಲ್ಲದೆ, ಪ್ಲೇಯರ್ ಆಫ್ ದ ಸೀರೀಸ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕ ಹಂತದಲ್ಲೇ ಇರುವ ಕಾನರ್, ತಮ್ಮ ಅದ್ಭುತ ಪ್ರದರ್ಶನದ ಮೂಲಕ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ 40ರೊಳಗೆ ಸ್ಥಾನ ಪಡೆಯುವ ಮೂಲಕ ಭರವಸೆ ಮೂಡಿಸಿದ್ದಾರೆ. ಒಟ್ಟಾರೆಯಾಗಿ, ಈ ಮೂವರೂ ಆಟಗಾರರು ತಮ್ಮದೇ ಆದ ವಿಶಿಷ್ಟ ಪ್ರದರ್ಶನಗಳ ಮೂಲಕ ಪ್ರಶಸ್ತಿಗೆ ಪ್ರಬಲ ಪೈಪೋಟಿ ಒಡ್ಡಿದ್ದು, ಅಂತಿಮವಾಗಿ ಯಾರ ಕೊರಳಿಗೆ ಈ ಪ್ರಶಸ್ತಿ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಸೂಕ್ತ ಕ್ರಮಕ್ಕೆ ಮಹಿಳಾ ಆಯೋಗ ಸೂಚನೆ!



















