ನವದೆಹಲಿ: ಹಲವಾರು ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗುವ ಸಾಗರೋತ್ತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಈಗ ಮತ್ತೊಂದು ವಿವಾದದ ಸುಳಿಗೆ ಸಿಲುಕಿದ್ದಾರೆ. ನೆರೆರಾಷ್ಟ್ರ ಚೀನಾವು ಗಡಿಯಲ್ಲಿ ನಿರಂತರವಾಗಿ ಭಾರತಕ್ಕೆ ಉಪಟಳ ನೀಡುತ್ತಿರುವ ಹೊರತಾಗಿಯೂ ಪಿತ್ರೋಡಾ ಅವರು, ‘ಚೀನಾ ಭಾರತದ ಶತ್ರು ರಾಷ್ಟ್ರವಲ್ಲ’ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅವರ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಕಾಂಗ್ರೆಸ್‌ಗೆ ಭಾರತದ ಹಿತಾಸಕ್ತಿಗಿಂತಲೂ ಚೀನಾದ ಹಿತಾಸಕ್ತಿಯೇ ಮುಖ್ಯವಾಗಿದೆ’ ಎಂದು ಕೆಂಡಕಾರಿದೆ. ಈ ನಡುವೆ, ವಿವಾದದಿಂದ ದೂರ ಉಳಿಯಲು ಮುಂದಾಗಿರುವ ಕಾಂಗ್ರೆಸ್, ಪಿತ್ರೋಡಾ ಹೇಳಿಕೆಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದೆ.
ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿರುವ ಪಿತ್ರೋಡಾ ಅವರು, ‘ಭಾರತಕ್ಕೆ ಚೀನಾದಿಂದ ಯಾವ ರೀತಿಯ ಬೆದರಿಕೆ ಇದೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಅಮೆರಿಕಕ್ಕೆ ಶತ್ರುವನ್ನು ವ್ಯಾಖ್ಯಾನಿಸುವ ಅಭ್ಯಾಸವಿದೆ. ಇದೇ ಕಾರಣಕ್ಕೆ ಚೀನಾ ಬೆದರಿಕೆಯನ್ನು ಅಗತ್ಯಕ್ಕಿಂತ ಹೆಚ್ಚಾಾಗಿ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಚೀನಾ ಭಾರತಕ್ಕೆ ಶತ್ರುವಲ್ಲ’ ಎಂದಿದ್ದಾರೆ. ಎಲ್ಲ ದೇಶಗಳು ಒಂದಾಗಿ ಕೆಲಸ ಮಾಡುವ ಸಮಯ ಬಂದಿದೆ ಎಂದೂ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಭಾರತದ ನೆಲವನ್ನು ಚೀನಾಗೆ ಬಿಟ್ಟುಕೊಟ್ಟ ಕಾಂಗ್ರೆಸಿಗರಿಗೆ ಈಗ ಚೀನಾದಿಂದ ಯಾವ ಬೆದರಿಕೆಯೂ ಕಾಣಿಸುತ್ತಿಲ್ಲ’ ಎಂದು ಹರಿಹಾಯ್ದಿದೆ.