ಕೋಲ್ಕತ್ತಾ/ಜಲ್ಪೈಗುರಿ: ಪಶ್ಚಿಮ ಬಂಗಾಳದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿ, ಐಪ್ಯಾಕ್ ಸಂಸ್ಥೆ ಮೇಲೆ ಇ.ಡಿ. ಶೋಧ ಮತ್ತು ರಾಜಕೀಯ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾರ್ಯಕ್ರಮದ ವೇದಿಕೆಯೊಂದರಲ್ಲೇ ದೇಶದ ಮುಖ್ಯ ನ್ಯಾಯಮೂರ್ತಿಗಳಿಗೆ ಮಹತ್ವದ ಮನವಿಯೊಂದನ್ನು ಮಾಡಿದ ಘಟನೆ ನಡೆದಿದೆ. ಕೇಂದ್ರೀಯ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿರುವ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ವಿಪತ್ತಿನಿಂದ ಉಳಿಸುವಂತೆ ಕೋರಿಕೊಂಡಿದ್ದಾರೆ. ಶನಿವಾರ ಜಲ್ಪೈಗುರಿಯಲ್ಲಿ ಕಲ್ಕತ್ತಾ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಸಮ್ಮುಖದಲ್ಲೇ ಮಮತಾ ಈ ಹೇಳಿಕೆ ನೀಡಿದ್ದಾರೆ.
ಸಿಜೆಐ ಮುಂದೆ ಮುಖ್ಯಮಂತ್ರಿಯ ಅಳಲು
ಸಮಾರಂಭದಲ್ಲಿ ವೇದಿಕೆಯ ಮೇಲಿದ್ದ ಮುಖ್ಯ ನ್ಯಾಯಮೂರ್ತಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ನಾನು ಈ ಮನವಿಯನ್ನು ನನಗಾಗಿ ಮಾಡುತ್ತಿಲ್ಲ, ಬದಲಾಗಿ ದೇಶದ ಜನರಿಗಾಗಿ ಮಾಡುತ್ತಿದ್ದೇನೆ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದೇಶದ ಇತಿಹಾಸವನ್ನು ರಕ್ಷಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ತನಿಖಾ ಸಂಸ್ಥೆಗಳ ಮೂಲಕ ಸುಳ್ಳು ಆರೋಪಗಳನ್ನು ಹೊರಿಸಿ ಜನರನ್ನು ಗುರಿ ಮಾಡಲಾಗುತ್ತಿದೆ. ನಾವು ನಿಮ್ಮ ರಕ್ಷಣೆಯಲ್ಲಿದ್ದೇವೆ ಮತ್ತು ನೀವೇ ಸಂವಿಧಾನದ ಪಾಲಕರು” ಎಂದು ಭಾವುಕರಾಗಿ ನುಡಿದರು. ಇದೇ ವೇಳೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ‘ಮೀಡಿಯಾ ಟ್ರಯಲ್’ ಪ್ರವೃತ್ತಿಗೆ ಕಡಿವಾಣ ಹಾಕಬೇಕೆಂದು ಅವರು ಒತ್ತಾಯಿಸಿದರು.
ಮಮತಾಗೆ ಝಾಡಿಸಿದ್ದ ಸುಪ್ರೀಂ ಕೋರ್ಟ್
ತೃಣಮೂಲ ಕಾಂಗ್ರೆಸ್‌ಗೆ ರಾಜಕೀಯ ಕಾರ್ಯತಂತ್ರ ರೂಪಿಸಿಕೊಡುವ ಐ-ಪ್ಯಾಕ್ (I-PAC) ಸಂಸ್ಥೆಯ ಮೇಲೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತ್ತು. ಈ ವೇಳೆ ಮಮತಾ ಬ್ಯಾನರ್ಜಿ ಅವರು ದಾಳಿ ನಡೆಯುತ್ತಿದ್ದ ಸ್ಥಳಕ್ಕೆ ದೌಡಾಯಿಸಿ, ಕೆಲವು ದಾಖಲೆಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ತೆಗೆದುಕೊಂಡು ಹೊರಬಂದಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ತನಿಖೆಗೆ ಅಡ್ಡಿಪಡಿಸುವ ಕೃತ್ಯ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ನೋಟಿಸ್ ಜಾರಿ ಮಾಡಿದೆ. ಕೇಂದ್ರ ಸಂಸ್ಥೆಗಳು ಗಂಭೀರ ಪ್ರಕರಣಗಳ ತನಿಖೆ ನಡೆಸುವಾಗ ರಾಜಕೀಯ ಪಕ್ಷಗಳು ಈ ರೀತಿ ಅಡ್ಡಿಪಡಿಸಿದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಚುನಾವಣಾ ಹೊಸ್ತಿಲಲ್ಲಿ ರಾಜಕೀಯ ಸಮರ
ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ದಾಳಿಗಳನ್ನು ನಡೆಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಕಲ್ಲಿದ್ದಲು ಹಗರಣದ ನೆಪದಲ್ಲಿ ತೃಣಮೂಲ ಕಾಂಗ್ರೆಸ್‌ನ ಚುನಾವಣಾ ತಂತ್ರಗಳನ್ನು ಅರಿಯಲು ಐ-ಪ್ಯಾಕ್ ಸಂಸ್ಥೆಯನ್ನು ಗುರಿ ಮಾಡಲಾಗುತ್ತಿದೆ ಎಂಬುದು ಅವರ ಆರೋಪ. ಮತ್ತೊಂದೆಡೆ, ಸುಪ್ರೀಂ ಕೋರ್ಟ್‌ನ ಇತ್ತೀಚಿನ ಟೀಕೆಗಳನ್ನು ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಮತ್ತು ಮುಖ್ಯಮಂತ್ರಿಗಳೇ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸಾಬೀತಾಗಿದೆ ಎಂದು ಟೀಕಿಸಿದೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಮತ್ತೊಬ್ಬ ಹಿಂದೂ ವ್ಯಾಪಾರಿಯ ಹತ್ಯೆ



















