ನವದೆಹಲಿ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳಕ್ಕೆ ಹೊರಟಿದ್ದ ಭಕ್ತರ ಕಾರೊಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ, 10 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ 19ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಯಾಗ್‌ರಾಜ್-ಮಿರ್ಜಾಪುರ ಹೆದ್ದಾರಿಯ ಮೇಜಾ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.
ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಉದ್ದೇಶದಿಂದ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಿಂದ ಭಕ್ತರ ಗುಂಪೊಂದು ಬೊಲೆರೋ ಕಾರಿನಲ್ಲಿ ಪ್ರಯಾಗ್‌ರಾಜ್‌ಗೆ ಹೊರಟಿತ್ತು. ಹೆದ್ದಾರಿಯ ಮೇಜಾಗೆ ತಲುಪುತ್ತಿದ್ದಂತೆಯೇ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಿಂದ ಬರುತ್ತಿದ್ದ ಬಸ್‌ಗೆ ಈ ಬೊಲೆರೋ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ 10 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಬಸ್ಸಿನಲ್ಲಿದ್ದವರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಮಿನಿ ಬಸ್ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿ ಆಂಧ್ರಪ್ರದೇಶದ 7 ಮಂದಿ ಯಾತ್ರಾರ್ಥಿಗಳು ಸಾವಿಗೀಡಾಗಿದ್ದರು. ಮಹಾಕುಂಭಮೇಳಕ್ಕೆ ತೆರಳಲು ವಿಮಾನದ ವೆಚ್ಚ ದುಬಾರಿಯಾಗಿರುವ ಕಾರಣ ಬಹಳಷ್ಟು ಮಂದಿ ರಸ್ತೆ ಮಾರ್ಗವಾಗಿಯೇ ಉತ್ತರಪ್ರದೇಶದತ್ತ ತೆರಳುತ್ತಿದ್ದಾರೆ.
ಜನವರಿ 13ರಂದು ಆರಂಭವಾಗಿರುವ ಮಹಾ ಕುಂಭಮೇಳವು ಫೆಬ್ರವರಿ 26ರವರೆಗೆ ನಡೆಯಲಿದೆ.