ಗದಗ: ಹೈಸ್ಕೂಲ್ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಕಾರು ಅಪಘಾತವಾದ ಪರಿಣಾಮ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಹುಲಕೋಟಿ ರೂರಲ್ ಇಂಜಿನಿಯರಿಂಗ್ ಕಾಲೇಜಿನ ಹತ್ತಿರ ನಡೆದಿದೆ. ಮಹಮ್ಮದ್ ಮುಜಾವರ್ (16), ಸಂಜೀವ್ ಗಿರಡ್ಡಿ (16) ಘಟನೆಯಲ್ಲಿ ಸಾವನ್ನಪ್ಪಿರುವ ವಿದ್ಯಾರ್ಥಿಗಳಾಗಿದ್ದರೆ, ಆಶಿಸ್ ಗುಂಡುರ್ (16) ಹಾಗೂ ಮತ್ತೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಈಡಾದ ವಿದ್ಯಾರ್ಥಿಗಳೆಲ್ಲ ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ಹೈಸ್ಕೂಲ್ ನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತು. ಹೀಗಾಗಿ ವಿದ್ಯಾರ್ಥಿಗಳು ತಡರಾತ್ರಿಯವರೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆನಂತರ ಕಾರಿನಲ್ಲಿ ಮನೆಗೆ ತೆರಳಿದ್ದಾರೆ. ಅತಿಯಾದ ವೇಗವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.