ಪ್ರಯಾಗ್‌ರಾಜ್:
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಕಾಲ್ತುಳಿತ ದುರಂತವು 30 ಜನರನ್ನು ಬಲಿಪಡೆದುಕೊಂಡ ಹಿನ್ನೆಲೆಯಲ್ಲಿ ಮುಂದೆ ಇಂತಹ ದುರ್ಘಟನೆಗಳು ಸಂಭವಿಸದಂತೆ ತಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ.
ಘಟನೆಯ ಬೆನ್ನಲ್ಲೇ ಬುಧವಾರ ತುರ್ತು ವಿಶೇಷ ಸಭೆ ಕರೆದಿದ್ದ ಯೋಗಿ ಆದಿತ್ಯನಾಥ್ ಅವರು ಹಲವು ನಿಬಂಧನೆಗಳ ಜಾರಿಗೆ ನಿರ್ಧರಿಸಿದ್ದರು. ಅದರಂತೆ, ಗುರುವಾರ ಆಡಳಿತವು ಕುಂಭ ಪ್ರದೇಶಕ್ಕೆ ಅನ್ವಯವಾಗುವಂತೆ 5 ಪ್ರಮುಖ ಬದಲಾವಣೆಗಳನ್ನು ಜಾರಿ ಮಾಡಿವೆ.
5 ಪ್ರಮುಖ ಬದಲಾವಣೆಗಳು ಯಾವುವು:
ವಾಹನಮುಕ್ತ ವಲಯ: ಮಹಾಕುಂಭ ಮೇಳೆ ನಡೆಯುತ್ತಿರುವ ಪ್ರದೇಶಕ್ಕೆ ಯಾವುದೇ ರೀತಿಯ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇಡೀ ಪ್ರದೇಶವನ್ನು ವಾಹನ-ಮುಕ್ತ ವಲಯ ಎಂದು ಘೋಷಿಸಲಾಗಿದೆ.
ವಿವಿಐಪಿ ಪಾಸ್ ರದ್ದು: ಯಾವುದೇ ವಾಹನಗಳ ಪ್ರವೇಶಕ್ಕೂ ವಿಶೇಷ ಪಾಸ್‌ಗಳನ್ನು ವಿತರಿಸಲಾಗುವುದಿಲ್ಲ. ವಿವಿಐಪಿ ಪಾಸ್‌ಗಳನ್ನು ರದ್ದು ಮಾಡಲಾಗಿದ್ದು, ಈ ವಿಚಾರದಲ್ಲಿ ಯಾರಿಗೂ ಯಾವುದೇ ವಿನಾಯ್ತಿ ಇಲ್ಲ.
ಒನ್-ವೇ ಜಾರಿ: ಭಕ್ತಾದಿಗಳ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಒನ್-ವೇ ಟ್ರಾಫಿಕ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ವಾಹನಗಳ ಪ್ರವೇಶಕ್ಕೆ ನಿರ್ಬಂಧ: ಪ್ರಯಾಗ್‌ರಾಜ್‌ನ ನೆರೆಹೊರೆಯ ಜಿಲ್ಲೆಗಳಿಂದ ಬರುವ ವಾಹನಗಳನ್ನು ಜಿಲ್ಲಾ ಗಡಿಗಳಲ್ಲೇ ತಡೆಯುವುದು. ಗಡಿಗಳಿಂದ ಒಳಗೆ ಯಾವುದೇ ವಾಹನಗಳಿಗೂ ಪ್ರವೇಶವಿಲ್ಲ. ಈ ಮೂಲಕ ದಟ್ಟಣೆ ನಿಯಂತ್ರಣಕ್ಕೆ ಕ್ರಮ.

ಫೆಬ್ರವರಿ 4ರವರೆಗೆ ಕಠಿಣ ನಿಯಮಗಳು: ಫೆಬ್ರವರಿ 4ರವರೆಗೆ ನಗರದೊಳಕ್ಕೆ ನಾಲ್ಕು ಚಕ್ರಗಳ ಎಲ್ಲ ವಾಹನಗಳ ಪ್ರವೇಶಕ್ಕೂ ನಿರ್ಬಂಧ.
ಇವಿಷ್ಟೇ ಅಲ್ಲ ದಟ್ಟಣೆ ನಿಯಂತ್ರಣದ ಕ್ರಮವಾಗಿ, ಐಎಎಸ್ ಅಧಿಕಾರಿಗಳಾದ ಆಶಿಷ್ ಗೋಯಲ್ ಮತ್ತು ಭಾನು ಗೋಸ್ವಾಮಿ ಅವರನ್ನು ಈ ಕೂಡಲೇ ಪ್ರಯಾಗ್‌ರಾಜ್‌ಗೆ ತಲುಪುವಂತೆ ನಿರ್ದೇಶನ ನೀಡಲಾಗಿದೆ. ಈ ಇಬ್ಬರು ಅಧಿಕಾರಿಗಳು 2019ರಲ್ಲಿ ನಡೆದಿದ್ದ ಅರ್ಧ ಕುಂಭವನ್ನು ಯಶಸ್ವಿಯಾಗಿ ನಿಭಾಯಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆ ಸಂದರ್ಭದಲ್ಲಿ ಗೋಸ್ವಾಮಿ ಅವರು ಜಿಲ್ಲಾಧಿಕಾರಿಯಾಗಿಯೂ, ಕುಂಭಮೇಳ ಪ್ರಾಧಿಕಾರದ ಉಪಾಧ್ಯಕ್ಷರಾಗಿಯೂ, ಆಶಿಷ್ ಗೋಯಲ್ ಅವರು ಅಲಹಾಬಾದ್ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದರು.
ಯಾವುದೇ ಸಮಸ್ಯೆಗಳಿಲ್ಲದೆ ಸರಾಗವಾಗಿ ಕುಂಭಮೇಳ ಜರುಗುವಂತೆ ನೋಡಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಇಬ್ಬರು ಅಧಿಕಾರಿಗಳಿಗೂ ಈಗ ಪ್ರಯಾಗ್‌ರಾಜ್‌ಗೆ ಬುಲಾವ್ ನೀಡಲಾಗಿದೆ.
ಜೊತೆಗೆ, ಈ ಹಿಂದೆ ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಿದ ಅನುಭವವಿರುವ 5 ಮಂದಿ ವಿಶೇಷ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ಕೂಡ ಕುಂಭಮೇಳದಲ್ಲಿ ನಿಯೋಜಿಸಲಾಗಿದೆ.