ಚಂಡೀಗಢ: ಪಾಕಿಸ್ತಾನದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಗುರುನಾನಕ್ ಜಯಂತಿಯನ್ನು (ಗುರುಪುರಬ್) ಹಿನ್ನೆಲೆಯಲ್ಲಿ ನಂಕಾನಾ ಸಾಹಿಬ್ ಮತ್ತು ಕರ್ತಾರಪುರ ಸಾಹಿಬ್ ಗುರುದ್ವಾರಗಳಿಗೆ ಸಿಖ್ ಭಕ್ತರು ಭೇಟಿ ನೀಡುವುದನ್ನು ತಡೆಯುವಂತೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಸಲಹೆಗೆ ಪಂಜಾಬ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ನಿರ್ಧಾರ ಸಾವಿರಾರು ಭಕ್ತರ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾದದ್ದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸೆಪ್ಟೆಂಬರ್ 12ರಂದು ಕೇಂದ್ರ ಗೃಹ ಇಲಾಖೆಯು ಒಂದು ಸಲಹಾ ಪ್ರಕಟಣೆಯನ್ನು ಹೊರಡಿಸಿತ್ತು. ಅದರಲ್ಲಿ, ಪಹಲ್ಗಾಮ್ ಉಗ್ರ ದಾಳಿ ಹಾಗೂ ‘ಆಪರೇಷನ್ ಸಿಂದೂರ’ ನಂತರದಲ್ಲಿ ಪಾಕಿಸ್ತಾನ ಜತೆಗೆ ಸಂಘರ್ಷ ತೀವ್ರಗೊಂಡಿರುವ ಕಾರಣಕ್ಕೆ ಈ ಬಾರಿ ಕರ್ತಾರ್ಪುರಕ್ಕೆ ಸಿಖ್ ಯಾತ್ರಿಕರ ಪ್ರವಾಸವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿತ್ತು. ಅಲ್ಲದೇ ಈ ನಿರ್ದೇಶನವನ್ನು ಪಂಜಾಬ್ ಜೊತೆಗೆ ದೆಹಲಿ, ಜಮ್ಮು-ಕಾಶ್ಮೀರ, ಹರ್ಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೂ ಕಳುಹಿಸಲಾಗಿತ್ತು.
ಆದರೆ ಸೆ.14ರಂದು ನಡೆದ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಬಳಿಕ ಈ ನಿರ್ಬಂಧದ ಬಗ್ಗೆ ರಾಜಕೀಯ ಹಾಗೂ ಧಾರ್ಮಿಕ ನಾಯಕರು ಪ್ರಶ್ನೆ ಎತ್ತಿದ್ದಾರೆ. “ಭಾರತ-ಪಾಕ್ ತಂಡಗಳು ಕ್ರಿಕೆಟ್ ಆಡಬಹುದು ಎಂದಾದರೆ, ಯಾತ್ರೆಗೆ ಹೋಗಲು ಯಾಕೆ ಅವಕಾಶವಿಲ್ಲ?” ಎಂದು ಬಹಿರಂಗವಾಗಿಯೇ ಪ್ರಶ್ನಿಸಿತೊಡಗಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೇಂದ್ರದ ಈ ನಿಲುವನ್ನು “ದ್ವಂದ್ವ ನೀತಿ” ಎಂದು ಖಂಡಿಸಿದ್ದಾರೆ. “ಭಕ್ತರಿಗೆ ಕರ್ತಾರಪುರ ಸಾಹಿಬ್ ಹಾಗೂ ನಂಕಾನಾ ಸಾಹಿಬ್ ಭೇಟಿಯನ್ನು ತಡೆಯುವುದು ಧಾರ್ಮಿಕ ಭಾವನೆಗಳಿಗೆ ಮಾಡುವ ಅವಮಾನ. ಕ್ರಿಕೆಟ್ ಮತ್ತು ರಾಜಕೀಯ ಕಾಯಬಹುದು, ಭಕ್ತಿ ಕಾಯುವುದಿಲ್ಲ,” ಎಂದು ಹೇಳಿದ್ದಾರೆ. ಅಲ್ಲದೇ, ಕ್ರಿಕೆಟ್ ಪಂದ್ಯಗಳಿಂದ ಬರಬಹುದಾದ ಹಣವೇ ಕೊನೆಗೆ ಭಯೋತ್ಪಾದನೆ ಮತ್ತು ಮಾದಕ ವಸ್ತುಗಳ ಮಾರ್ಗವನ್ನು ಸೇರುತ್ತದೆ ಎಂದೂ ಸಿಎಂ ಮಾನ್ ಹೇಳಿದ್ದಾರೆ.
ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ನಿರ್ಧಾರ ಮರುಪರಿಶೀಲನೆ ಮಾಡಲು ಮನವಿ ಮಾಡಿಕೊಂಡಿದ್ದು, “ಭಕ್ತರಿಗೆ ಕರ್ತಾರಪುರ ದಾರಿ ತೆರೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಹಾಕಿ ಒಲಿಂಪಿಯನ್ ಪರ್ಗತ್ ಸಿಂಗ್ ಕೂಡ ಸರ್ಕಾರದ ದ್ವಂದ್ವ ನೀತಿಯನ್ನು ಪ್ರಶ್ನಿಸಿ, “ಕ್ರಿಕೆಟ್, ವ್ಯಾಪಾರ, ಸಿನಿಮಾಗಳಲ್ಲಿ ಪಾಕಿಸ್ತಾನ ಜತೆಗಿನ ಸಂಬಂಧವನ್ನು ಸುಲಭವಾಗಿ ಒಪ್ಪಿಕೊಳ್ಳುವ ಸರ್ಕಾರ, ಏಕೆ ಸಿಖ್ ಭಕ್ತರ ಧಾರ್ಮಿಕ ಹಕ್ಕಿನಲ್ಲಿ ತಲೆಹಾಕುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರ ಪಂಜಾಬ್‌ನ ರಾಜಕೀಯ ವಲಯದಷ್ಟೇ ಅಲ್ಲ, ಸಿಖ್ ಧಾರ್ಮಿಕ ನಾಯಕರಿಂದಲೂ ವ್ಯಾಪಕವಾಗಿ ವಿರೋಧಕ್ಕೆ ಕಾರಣವಾಗಿದೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳು ನಡೆಯುತ್ತಿರುವಾಗಲೇ ಯಾತ್ರಿಕರ ಧಾರ್ಮಿಕ ಹಕ್ಕಿಗೆ ನಿರ್ಬಂಧ ಹೇರುವ ಕೇಂದ್ರ ಸರ್ಕಾರದ ನಿಲುವು ಗಂಭೀರ ಚರ್ಚೆಗೆ ಕಾರಣವಾಗಿದೆ.



















