ಉಡುಪಿ: ಬೈಂದೂರು ಕ್ಷೇತ್ರದ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಹಾಗೂ ರೈತ ಪರ ಹೋರಾಟಗಾರ ದೀಪಕ್ ಕುಮಾರ್ ಶೆಟ್ಟಿಯವರನ್ನು ಪಕ್ಷದಿಂದ 6 ವರ್ಷದ ಅವಧಿಗೆ ಉಚ್ಚಾಟನೆ ಮಾಡಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ನೋಟಿಸ್ ಕಳುಹಿಸಿದ್ದಾರೆ.
ಈ ನಿಲುವು ಬಿಜೆಪಿ ಕಾರ್ಯಕರ್ತ ವಲಯದಲ್ಲಿ ಬಾರಿ ಸಂಚಲನ ಉಂಟು ಮಾಡಿದ್ದು ದೀಪಕ್ ಕುಮಾರ್ ಶೆಟ್ಟಿ ಅಭಿಮಾನಿಗಳಿಗೆ ಬಾರಿ ಅಸಾಮಾಧಾನ ಉಂಟಾಗಿದೆ. ದೀಪಕ್ ಕುಮಾರ್ ಶೆಟ್ಟಿ ಉಚ್ಚಾಟನೆಗೆ ಪ್ರಮುಖ ಕಾರಣ ಬೈಂದೂರು ಶಾಸಕರು ಮತ್ತು ಇವರ ನಡುವಿನ ಆಂತರಿಕ ಸಮರವಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಪಕ್ಷದ ಅಧೀಕೃತ ವೇದಿಕೆಯನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವ ಮೂಲಕ ಪಕ್ಷದ ಘನತೆ, ಶಿಸ್ತಿಗೆ ಹಾನಿಯಾಗಿರುವ ಕಾರಣ ನೀಡಿ ಉಚ್ಚಾಟನೆ ಮಾಡಲಾಗಿದೆ. ಇದಕ್ಕೆ ಬಹುಮುಖ್ಯ ಕಾರಣ ದೀಪಕ್ ಕುಮಾರ್ ಶೆಟ್ಟಿಯವರು ಗ್ರಾಮೀಣ ಭಾಗದ ನ್ಯಾಯ ಒದಗಿಸಲು ಹೋರಾಟ ಆರಂಭಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವುದು ಶಾಸಕರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಮಾತ್ರವಲ್ಲದೆ ಕಳೆದ ಒಂದು ವರ್ಷದಿಂದ ಶಾಸಕರು ಮತ್ತು ದೀಪಕ್ ಕುಮಾರ್ ಶೆಟ್ಟಿ ನಡುವಿನ ತೆರೆಮರೆಯ ಸೆಣಸಾಟ ಗುಟ್ಟಾಗಿ ಉಳಿದಿರಲಿಲ್ಲ. ಮರಳು ದಂಧೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಬಳಿ ಒಪ್ಪಂದದ ಹೊಂದಾಣಿಕೆ ಕುರಿತು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ರೈತ ಹೋರಾಟಕ್ಕೆ ಹಿನ್ನೆಡೆ ಮಾಡಬೇಕೆನ್ನುವ ಮೂಲ ಉದ್ದೇಶದಿಂದ ಇಷ್ಟೆಲ್ಲಾ ಪ್ರಯತ್ನ ನಡೆದಿದೆ ಎನ್ನುವುದು ದೀಪಕ್ ಕುಮಾರ್ ಶೆಟ್ಟಿ ಬೆಂಬಲಿಗರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ | ಸಿದ್ದರಾಮಯ್ಯ ಗರಂ



















