ನವದೆಹಲಿ: ಟ್ರಂಪ್ ಸುಂಕ ಪ್ರಹಾರ, ವೀಸಾ ಶುಲ್ಕ ಹೆಚ್ಚಳದ ಬೆನ್ನಲ್ಲೇ ತಮ್ಮ 126ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಆತ್ಮನಿರ್ಭರತೆ ಮತ್ತು ಸ್ವದೇಶಿ ಉತ್ಪನ್ನಗಳ ಬಳಕೆಯ ಕುರಿತು ಮತ್ತೊಮ್ಮೆ ಬಲವಾಗಿ ಕರೆ ನೀಡಿದ್ದಾರೆ. ಹಬ್ಬಗಳ ಋತುವಿನಲ್ಲಿ ದೇಶೀಯವಾಗಿ ತಯಾರಿಸಿದ ವಸ್ತುಗಳನ್ನು, ವಿಶೇಷವಾಗಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
“ನಾವು ಆತ್ಮನಿರ್ಭರರಾಗಬೇಕು, ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು ಮತ್ತು ಅದರ ದಾರಿ ಸ್ವದೇಶಿಯಿಂದ ಮಾತ್ರ ಸಾಧ್ಯ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸ್ವದೇಶಿ ಮತ್ತು ಖಾದಿಗೆ ಒತ್ತು:
ಮಹಾತ್ಮ ಗಾಂಧಿಯವರು ಯಾವಾಗಲೂ ಸ್ವದೇಶಿ ವಸ್ತುಗಳ ಬಳಕೆಗೆ, ಅದರಲ್ಲಿಯೂ ಖಾದಿಗೆ ಹೆಚ್ಚು ಒತ್ತು ನೀಡುತ್ತಿದ್ದರು ಎಂಬುದನ್ನು ಪ್ರಧಾನಿ ಸ್ಮರಿಸಿದ್ದಾರೆ. “ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ಖಾದಿಯ ಮೇಲಿನ ಆಕರ್ಷಣೆ ಗಣನೀಯವಾಗಿ ಹೆಚ್ಚಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಪ್ರಯುಕ್ತ ನೀವೆಲ್ಲರೂ ಒಂದಲ್ಲ ಒಂದು ಖಾದಿ ಉತ್ಪನ್ನವನ್ನು ಖರೀದಿಸಬೇಕೆಂದು ನಾನು ಒತ್ತಾಯಿಸುತ್ತೇನೆ,” ಎಂದಿದ್ದಾರೆ. ಹಬ್ಬದ ಸಂದರ್ಭದಲ್ಲಿ ಕೇವಲ ಸ್ವದೇಶಿ ಉತ್ಪನ್ನಗಳಿಂದಲೇ ಆಚರಿಸಲು ಸಂಕಲ್ಪ ಮಾಡಿದರೆ, ನಮ್ಮ ಸಂಭ್ರಮವು ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಾರಿಶಕ್ತಿಗೆ ಮೆಚ್ಚುಗೆ:
ಇತ್ತೀಚೆಗೆ ಹಾಯಿದೋಣಿ ಮೂಲಕ ಜಗತ್ತನ್ನು ಸುತ್ತಿ ಇತಿಹಾಸ ನಿರ್ಮಿಸಿದ ಲೆಫ್ಟಿನೆಂಟ್ ಕಮಾಂಡರ್ ಕೆ. ದಿಲ್ನಾ ಮತ್ತು ಲೆಫ್ಟಿನೆಂಟ್ ಕಮಾಂಡರ್ ರೂಪಾ ಅಲಗಿರಿಸಾಮಿ ಅವರೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದಾರೆ. ಈ ಇಬ್ಬರು ಮಹಿಳೆಯರು 2024ರ ಅಕ್ಟೋಬರ್ 2 ರಂದು ಗೋವಾದಿಂದ ಹೊರಟು, 238 ದಿನಗಳ ಕಾಲ ಸುಮಾರು 47,500 ಕಿಲೋಮೀಟರ್ ಪ್ರಯಾಣಿಸಿ, 2025ರ ಮೇ 29 ರಂದು ಭಾರತಕ್ಕೆ ಮರಳಿದರು. ವಿಶ್ವದ ಅತ್ಯಂತ ದೂರದ ಸ್ಥಳವಾದ ‘ಪಾಯಿಂಟ್ ನೆಮೊ’ದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು ಈ ಪ್ರಯಾಣದ ಸ್ಮರಣೀಯ ಕ್ಷಣವಾಗಿತ್ತು ಎಂದು ಲೆ. ಕಮಾಂಡರ್ ದಿಲ್ನಾ ವಿವರಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಶತಮಾನೋತ್ಸವ:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯ 100ನೇ ವರ್ಷವನ್ನು ಸೂಚಿಸುವುದರಿಂದ ಈ ವರ್ಷದ ವಿಜಯದಶಮಿಯು ವಿಶೇಷವಾಗಿದೆ ಎಂದು ಮೋದಿ ತಿಳಿಸಿದ್ದಾರೆ. “ನೂರು ವರ್ಷಗಳ ಹಿಂದೆ ದೇಶವು ಗುಲಾಮಗಿರಿಯ ಸಂಕೋಲೆಗಳಿಂದ ಬಂಧಿಸಲ್ಪಟ್ಟಿದ್ದಾಗ, ದೇಶದ ಸ್ವಾತಂತ್ರ್ಯದ ಜೊತೆಗೆ ಬೌದ್ಧಿಕ ಗುಲಾಮಗಿರಿಯಿಂದಲೂ ದೇಶವನ್ನು ಮುಕ್ತಗೊಳಿಸುವುದು ಮುಖ್ಯವಾಗಿತ್ತು. ಈ ಹಿನ್ನೆಲೆಯಲ್ಲಿ, ಡಾ. ಹೆಡಗೇವಾರ್ ಅವರು 1925ರ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದರು,” ಎಂದು ಪ್ರಧಾನಿ ಹೇಳಿದ್ದಾರೆ. ಸಂಘದ ತ್ಯಾಗ, ಸೇವೆ ಮತ್ತು ಶಿಸ್ತಿನ ಮನೋಭಾವವನ್ನು ಅವರು ಶ್ಲಾಘಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರು ಮುಂಬರುವ ದೀಪಾವಳಿ ಹಬ್ಬಕ್ಕೆ ಶುಭ ಹಾರೈಸಿದ್ದಾರೆ.