ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯನಿರತ ಬಿಎಸ್ಎಫ್ ಯೋಧರೊಬ್ಬರು ತಮ್ಮ ಬೆಟಾಲಿಯನ್ ಪ್ರಧಾನ ಕಚೇರಿಯಿಂದ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ.
ಪಂಥಾಚೌಕ್‌ನಲ್ಲಿರುವ 60ನೇ ಬೆಟಾಲಿಯನ್‌ನಲ್ಲಿ ನಿಯೋಜನೆಗೊಂಡಿದ್ದ ಸುಗಮ್ ಚೌಧರಿ ಎಂಬ ಯೋಧ, ಜುಲೈ 31ರ ಗುರುವಾರ ತಡರಾತ್ರಿ ತಮ್ಮ ಶಿಬಿರದಿಂದ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಷಯ ತಿಳಿದ ತಕ್ಷಣ, ಸಮೀಪದ ಪ್ರದೇಶಗಳಲ್ಲಿ ದೊಡ್ಡಮಟ್ಟದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ, ವ್ಯಾಪಕ ಹುಡುಕಾಟದ ಹೊರತಾಗಿಯೂ ಯೋಧನ ಯಾವುದೇ ಸುಳಿವು ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಂದರ್ಭದಲ್ಲೇ ಈ ಘಟನೆಯು ನಡೆದಿದ್ದು, ಆತಂಕಕ್ಕೂ ಕಾರಣವಾಗಿದೆ. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಗ್ರರ ವಿರುದ್ಧದ ಕಾರ್ಯಾಚರಣೆಗಳು ಈ ಪ್ರದೇಶದಲ್ಲಿ ಚುರುಕುಗೊಂಡಿವೆ. ಇತ್ತೀಚೆಗಷ್ಟೇ ಪಹಲ್ಗಾಮ್ ದಾಳಿಕೋರ ಉಗ್ರರನ್ನು ಭದ್ರತಾ ಪಡೆಗಳು ದಾಚಿಗಾಮ್ ಅರಣ್ಯದಲ್ಲಿ ಹತ್ಯೆಗೈದಿದ್ದವು.
ಭದ್ರತಾ ಪಡೆಗಳ ಪ್ರಕಾರ, ಕಳೆದ 100 ದಿನಗಳಲ್ಲಿ ಪಹಲ್ಗಾಮ್ ದಾಳಿಯ ಸಂಚುಕೋರ ಸೇರಿದಂತೆ 12 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹತರಾದವರಲ್ಲಿ ಆರು ಮಂದಿ ಪಾಕಿಸ್ತಾನಿ ಭಯೋತ್ಪಾದಕರು ಮತ್ತು ಉಳಿದ ಆರು ಮಂದಿ ಸ್ಥಳೀಯವಾಗಿ ನೇಮಕಗೊಂಡಿದ್ದ ಉಗ್ರರಾಗಿದ್ದಾರೆ.



















