ಭಾರತೀಯ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿದೆ. ಈ ವೇಳೆ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ.
ಈ ಪಂದ್ಯದಲ್ಲಿ ಭಾರತದ ಪರ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 4 ವಿಕೆಟ್ ಪಡೆದು ಮಿಂಚಿದ್ದಾರೆ. ಜಸ್ಪ್ರೀತ್ ಬುಮ್ರಾ ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಉರುಳಿಸುವ ಮೂಲಕ ಒಂದು ವರ್ಷದಲ್ಲಿ ಅಧಿಕ ಟೆಸ್ಟ್ ವಿಕೆಟ್ ಉರುಳಿಸಿದ ಭಾರತದ ಬೌಲರ್ಗಳ ಪೈಕಿ ಟಾಪ್ ನಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಹಿಂದಿಕ್ಕುವ ಮೂಲಕ ಬುಮ್ರಾ ಈ ದಾಖಲೆ ಮಾಡಿದ್ದಾರೆ.
ಜಹೀರ್ ಖಾನ್ 2002 ರಲ್ಲಿ 51 ವಿಕೆಟ್ ಪಡೆಯುವ ಮೂಲಕ ಒಂದು ವರ್ಷದಲ್ಲಿ ಭಾರತದ ಪರ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ಮೂರನೇ ವೇಗದ ಬೌಲರ್ ಎನಿಸಿಕೊಂಡಿದ್ದರು. ಈಗ ಅವರ ಸ್ಥಾನವನ್ನು ಜಸ್ಪ್ರೀತ್ ಬುಮ್ರಾ ಆಕ್ರಮಿಸಿಕೊಂಡಿದ್ದಾರೆ. ಬುಮ್ರಾ ಇಲ್ಲಿಯವರೆಗೆ 53 ವಿಕೆಟ್ ಉರುಳಿಸಿದ್ದಾರೆ.
ಇದೇ ವರ್ಷ ಬುಮ್ರಾಗೆ ಇನ್ನೂ ಎರಡು ಟೆಸ್ಟ್ ಪಂದ್ಯ ಆಡುವ ಅವಕಾಶ ಸಿಗಲಿದೆ. ಹೀಗಾಗಿ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ. ಕಪಿಲ್ ದೇವ್ 1979ರಲ್ಲಿ 74 ಹಾಗೂ 1983 ರಲ್ಲಿ 75 ವಿಕೆಟ್ ಗಳನ್ನು ಉರುಳಿಸಿ, ಮೊರಲೆರಡು ಸ್ಥಾನದಲ್ಲಿದ್ದಾರೆ.
ಹೀಗಾಗಿ ಬುಮ್ರಾ ಮುಂದೆ ಇರುವ 5 ಇನ್ನಿಂಗ್ಸ್ ಗಳಲ್ಲಿ 23 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರೆ, ಹೊಸ ದಾಖಲೆ ಬರೆಯಲಿದ್ದಾರೆ. ಬುಮ್ರಾ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ಆಡಿರುವ 53 ಇನ್ನಿಂಗ್ಸ್‌ಗಳಲ್ಲಿ 125 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಬುಮ್ರಾ, ಸೆನಾ ರಾಷ್ಟ್ರಗಳಲ್ಲಿ 125 ವಿಕೆಟ್ ಕಬಳಿಸಿದ್ದ ಭಾರತದ ವೇಗದ ಬೌಲರ್ ಶಮಿ ಅವರನ್ನು ಹಿಂದೆ ಹಾಕಿದ್ದಾರೆ. ಈ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಭಾರತದ ಪರ ಮೊದಲ ಸ್ಥಾನದಲ್ಲಿದ್ದಾರೆ. ಅವರು 141 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.