ಬೆಳಗಾವಿ: ಬಿಜೆಪಿ ಹಾಗೂ ಆರೆಸ್ಸೆಸ್ ಸಂವಿಧಾನ ದ್ವೇಷಿ. ಇವೆರಡು ದೇಶದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿವೆ. ಭಾರತೀಯರ ಮಧ್ಯೆ ಒಡಕು ಮೂಡಿಸುತ್ತ ದೇಶವನ್ನು ದುರ್ಬಲಗೊಳಿಸುತ್ತಿವೆ. ಬಿಜೆಪಿಯ ಈ ಪ್ರಯತ್ನವನ್ನು ನಾವು ಸೋಲಿಸಬೇಕು. ಇದಕ್ಕೆ ಗಾಂಧಿ-ಅಂಬೇಡ್ಕರ್ ನಮಗೆ ಮಾರ್ಗದರ್ಶಕರು ಎಂದು ಹೇಳಿದ್ದಾರೆ.
ಬೆಳಗಾವಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನ ಜಾರಿಯಾದಾಗ ಬಿಜೆಪಿ ಪರಿವಾರ ಅಂಬೇಡ್ಕರ್ ಭಾವಚಿತ್ರವನ್ನು, ಸಂವಿಧಾನವನ್ನು ಸುಟ್ಟಿತ್ತು. ಹೀಗಾಗಿ ಬಿಜೆಪಿ ಹಾಗೂ ಆರೆಸ್ಸೆಸ್ ನ್ನು ಈ ದೇಶ, ದೇಶದ ಜನ ಯಾವತ್ತೂ ಕ್ಷಮಿಸುವುದಿಲ್ಲ ಎಂದು ಆರೋಪಿಸಿದ್ದಾರೆ.
ನಾವು 5 ಗ್ಯಾರಂಟಿ ಜಾರಿ ಮಾಡಿದ್ದೇವೆ. ಅದಕ್ಕಾಗಿ ಬಜೆಟ್‌ನಲ್ಲಿ 55 ಸಾವಿರ ಕೋಟಿ ರೂ. ಹಣ ತೆಗೆದಿಟ್ಟಿದ್ದೇವೆ. ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದರು. ಆದರೆ, ನೇರವಾಗಿ ಜನರಿಗೆ ಗ್ಯಾರಂಟಿ ಯೋಜನೆ ತಲುಪಿಸಿದ್ದೇವೆ. ಇದು ಬಡವರ ಪಕ್ಷ ಹಾಗೂ ಸರ್ಕಾರ. ಯಾವುದೇ ಕಾರಣಕ್ಕೂ ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದಾರೆ.
ಗ್ಯಾರಂಟಿಗಳ ಜೊತೆಗೆ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ನಾವು ದ್ವೇಷಿಸುವ ಕೆಲಸ ಮಾಡಲ್ಲ. ಪ್ರೀತಿಸುವ ಕೆಲಸ ಮಾಡುತ್ತೇವೆ. ಹಿಂದೂಗಳು, ಮುಸ್ಲಿಮರು ಒಟ್ಟಾಗಿ ಹೋಗಬೇಕಿದೆ ಎಂದು ಹೇಳಿದ್ದಾರೆ.