ಬೆಂಗಳೂರು: ನ್ಯಾಯಾಧೀಶರ ಆದೇಶಕ್ಕೆ ನಾನು ತಲೆ ಬಾಗುತ್ತೇನೆ. ಶಿಕ್ಷೆ ನೀಡುವಾಗ ಹಾಸನ ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದೇನೆ. 6 ತಿಂಗಳುಗಳಿಂದ ಅಪ್ಪ-ಅಮ್ಮನ ಮುಖ ನೋಡಿಲ್ಲ. ಮಹಿಳೆಯ ಅತ್ಯಾಚಾರ ಮಾಡಿದ್ದರೆ, ಆಕೆಯ ನಮ್ಮ ಮನೇಲಿ ಯಾವ ಕಾರಣಕ್ಕೆ ಕೆಲಸ ಮಾಡುತ್ತಿದ್ದರು? ನನಗೆ ದೋಷಿ ಅಂತ ಹೇಳಿದ್ದೀರಿ, ನ್ಯಾಯಾಧೀರ ಆದೇಶಕ್ಕೆ ತಲೆ ಬಾಗುತ್ತೇನೆ. ಶಿಕ್ಷೆ ನೀಡುವಾಗ ನನ್ನ ಕುಟುಂಬ ಪರಿಗಣಿಸಿ ಎಂದು ಅಪರಾಧಿ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದ್ದಾರೆ.
ಕೆ.ಆರ್ ನಗರದಲ್ಲಿ (KR Nagara) ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ (Rape Case) ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಶಿಕ್ಷೆ ಪ್ರಮಾಣ ಕುರಿತು ಸರ್ಕಾರಿ ಪರ ವಕೀಲರಾಗಿ ಎನ್. ಜಗದೀಶ್, ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ ವಾದ- ಪ್ರತಿವಾದ ಮಂಡಿಸಿದರು. ಮಧ್ಯಾಹ್ನ 2:45ಕ್ಕೆ ನ್ಯಾ. ಗಜಾನನ ಭಟ್ ಅವರ ಏಕ ಪೀಠ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ವಾದ-ಪ್ರತಿವಾದದ ನಂತರ ನಿಮ್ಮದೇನಾದ್ರೂ ಹೇಳೋದು ಇದೆಯಾ? ಎಂದು ನ್ಯಾಯಪೀಠ ಪ್ರಜ್ವಲ್ ನನ್ನು ಪ್ರಶ್ನಿಸಿತು. ಆಗ ಬಿಕ್ಕಿ ಬಿಕ್ಕಿ ಅತ್ತ ಪ್ರಜ್ವಲ್, ಹಾಸನ ಜಿಲ್ಲೆಗೆ ಸಾಕಷ್ಟು ಮಾಡಿದ್ದೇನೆ. ಚುನಾವಣೆಗೆ 6 ದಿನ ಮುಂಚಿತವಾಗಿ ಈ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸಾಕಷ್ಟು ವರ್ಷಗಳ ಹಿಂದೆ ನಡೆದಿದೆ ಅಂತ ಹೇಳಿದ್ದಾರೆ. ವಿಡಿಯೋ ಬಂದ ಮೇಲೆ ಮಹಿಳೆ ಹೊರಗೆ ಬಂದು ದೂರು ನೀಡಿದ್ದಾಳೆ. ನನ್ನ ಕುಟುಂಬವನ್ನೇ ನಾನು ಬಿಟ್ಟಂತೆ ಆಗಿ ಹೋಗಿದೆ. ಅಪ್ಪ – ಅಮ್ಮನನ್ನ 6 ತಿಂಗಳಿಂದ ನೋಡಿಲ್ಲ. ದೋಷಿ ಅಂತ ಹೇಳಿದ್ದೀರಿ, ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇನೆ. ಶಿಕ್ಷೆ ನೀಡುವಾಗ ನನ್ನ ಕುಟುಂಬವನ್ನ ಪರಿಗಣಿಸಿ ಎಂದು ಪ್ರಜ್ವಲ್ ಕಣ್ಣೀರು ಹಾಕಿದ್ದಾರೆ.
ನಾನು ರಾಜಕೀಯವಾಗಿ ಬೇಗ ಬೆಳೆದಿದ್ದೇ ತಪ್ಪಾಯ್ತು. ಎಸ್‌ಐಟಿ ನಂಬರ್ ನೀಡಿದ್ದರೂ ಯಾರು ದೂರು ನೀಡಲಿಲ್ಲ. ನಾನು ಕಾಲೇಜಿನಲ್ಲಿ ಮೆರಿಟ್ ವಿದ್ಯಾರ್ಥಿ ಆಗಿದ್ದೆ. ನನ್ನನ್ನ ದುರುದ್ದೇಶದಿಂದ ಸಿಲುಕಿಸಿದ್ದಾರೆ ಎಂದು ಗಳಗಳನೇ ಅತ್ತಿದ್ದಾರೆ.
ಕೆ.ಆರ್. ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು. ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ನಂತರ ವಿಷಯ ಹೊರಗೆ ಬರುತ್ತೆ ಎಂದು ತಿಳಿದು ಸಂತ್ರಸ್ತೆಯನ್ನ ರೇವಣ್ಣ, ಭವಾನಿ, ಸತೀಶ್ ಬಾಬು ಸೇರಿದಂತೆ 9 ಜನ ಸೇರಿ ಅಪಹರಿಸಿದ್ದರು. ನಂತರ ಸಂತ್ರಸ್ತೆಯನ್ನು ತೋಟದ ಮನೆಯಲ್ಲಿ ಕೂಡಿ ಹಾಕಲಾಗಿತ್ತು. ಈ ಪ್ರಕರಣದಿಂದಲೇ ರೇವಣ್ಣ ಸೇರಿದಂತೆ 8 ಜನ ಜೈಲಿಗೆ ಹೋಗಿದ್ದರು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಸಂತ್ರಸ್ತೆ ರಕ್ಷಿಸಿದ ಎಸ್‌ಐಟಿ, ಹೇಳಿಕೆ ದಾಖಲು ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆನಂತರ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಸಂತ್ರಸ್ತೆಯನ್ನು ಬೆತ್ತಲುಗೊಳಿಸಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ವಿಡಿಯೋವೊಂದು ಪತ್ತೆಯಾಗಿತ್ತು. ಇದು ಪ್ರಕರಣದ ಬಹುದೊಡ್ಡ ಸಾಕ್ಷ್ಯವಾಗಿ ಪರಿಣಮಿಸಿತು. ಕೊನೆಗೆ ಎಫ್‌ಎಸ್‌ಎಲ್ ಮೂಲಕ ವಿಡಿಯೋ ತುಣುಕಿನಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದು ಸಾಬೀತಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಪ್ರಜ್ವಲ್ ಅಪರಾಧಿಯಾಗಿದ್ದಾರೆ.



















