ಬೆಂಗಳೂರು : ಇದೇ ನವೆಂಬರ್ 6 ಹಾಗೂ 11ರಂದು ಎರಡು ಹಂತದಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಗೆಲುವಿಗಾಗಿ ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಿಗಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರುವ ಬಿಹಾರಿಗಳು ತಮ್ಮ ರಾಜ್ಯಕ್ಕೆ ಹೋಗಿ ಮತದಾನ ಮಾಡಿಬರಲು ಮೂರು ದಿನ ರಜೆ ನೀಡಬೇಕೆಂದು ಆಯಾ ಸಂಸ್ಥೆ, ಕಂಪನಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಡಿಕೆಶಿ, 2025ರ ನವೆಂಬರ್ 6 ಮತ್ತು 11ರಂದು ನಡೆಯಲಿರುವ ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಕೆಲಸ ಮಾಡುತ್ತಿರುವ ಬಿಹಾರದ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕಂಪನಿಗಳು, ಉದ್ಯಮಿದಾರರು, ಹೋಟೆಲ್‌ಗಳು ಮತ್ತು ಗುತ್ತಿಗೆದಾರರು ಕನಿಷ್ಠ ಮೂರು ದಿನಗಳ ವೇತನ ಸಹಿತ ರಜೆ ನೀಡಬೇಕು. ಈ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಕರಿಸಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ.
ಇನ್ನು, ಕಳೆದ ಭಾನುವಾರ ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್‌ನಲ್ಲಿ ಬಿಹಾರ ಮೂಲದ ಬೆಂಗಳೂರು ನಿವಾಸಿಗಳ ಸಂಘದ ಸದಸ್ಯರನ್ನು ಡಿಜೆ ಶಿವಕುಮಾರ್ ಭೇಟಿ ಮಾಡಿದ್ದು, ಬಿಹಾರದ ಅಭಿವೃದ್ಧಿಗಾಗಿ ಮಹಾಘಟಬಂಧನ್‌ಗೆ ಮತ ನೀಡಿ ಹಾಗೂ ನಿಮ್ಮ ಸಂಬಂಧಿಕರಿಗೂ ನಮಗೆ ಮತ ನೀಡುವಂತೆ ಹೇಳಿ ಎಂದು ಮನವಿ ಮಾಡಿದ್ದರು. ಅದಲ್ಲದೇ ಬೆಂಗಳೂರಿನಲ್ಲೊಂದು ಬಿಹಾರಿಗಳಿಗಾಗಿ ಸಮುದಾಯ ಭವನ ನಿರ್ಮನಿಸಿಕೊಡುವುದಾಗಿ ಭರವಸೆಯನ್ನು ಡಿಕೆಶಿ ನೀಡಿದ್ದಾರೆ.
ಇದನ್ನೂ ಓದಿ : ಹಿಂದುಜಾ ಗ್ರೂಪ್ ಅಧ್ಯಕ್ಷ ಗೋಪಿಚಂದ್ ಹಿಂದುಜಾ ನಿಧನ



















