ಭಾರತದಲ್ಲಿ 166 ಮಂದಿಯ ಸಾವಿಗೆ ಕಾರಣವಾದ 26/11ರ ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹಾವ್ವುರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕದ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಈ ಮೂಲಕ ಮುಂಬೈ ದಾಳಿಯ ರೂವಾರಿಗಳನ್ನು ಶಿಕ್ಷಿಸುವ ವಿಚಾರದಲ್ಲಿ ಭಾರತಕ್ಕೆ ದೊಡ್ಡಮಟ್ಟಿನ ಗೆಲುವು ಸಿಕ್ಕಂತಾಗಿದೆ. ಪ್ರಕರಣದ ಪ್ರಾಸಿಕ್ಯೂಟರ್ ಮತ್ತು ಹಿರಿಯ ವಕೀಲ ಉಜ್ವಲ್ ನಿಕಮ್ ಅವರೇ ಈ ವಿಚಾರವನ್ನು ಶನಿವಾರ ತಿಳಿಸಿದ್ದಾರೆ.
“ಇದು ಭಾರತಕ್ಕೆ ಅತಿದೊಡ್ಡ ಗೆಲುವು. ಅಮೆರಿಕದ ಸರ್ವೋಚ್ಚ ನ್ಯಾಯಾಲಯ(Supreme Court) ಉಗ್ರ ರಾಣಾನ ವಾದ ಹಾಗೂ ಮನವಿಗಳನ್ನು ಸ್ವೀಕರಿಸಲಿಲ್ಲ. ಹೀಗಾಗಿ, ಆತನ ಅರ್ಜಿ ತಿರಸ್ಕೃತಗೊಂಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಆತನನ್ನು ತಕ್ಷಣ ಗಡೀಪಾರು ಮಾಡಲಿದೆ ಎಂಬ ವಿಶ್ವಾಸವಿದೆ” ಎಂದು ನಿಕಮ್ ಹೇಳಿದ್ದಾರೆ.
2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮತ್ತೊಬ್ಬ ಸಂಚುಕೋರ ಡೇವಿಡ್ ಕೋಲಮನ್ ಹೆಡ್ಲಿಯೊಂದಿಗೆ ತಹಾವ್ವುರ್ ರಾಣಾ ನಿಕಟ ನಂಟು ಹೊಂದಿದ್ದ. ಈತ ತಪ್ಪಿತಸ್ಥ ಎಂದು ನ್ಯಾಯಾಲಯವೂ ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ಭಾರತವು ರಾಣಾನನ್ನು ಹಸ್ತಾಂತರಿಸುವಂತೆ ಅಮೆರಿಕಕ್ಕೆ ಮನವಿ ಸಲ್ಲಿಸಿತ್ತು. ಆದರೆ ತನ್ನ ಶಿಕ್ಷೆಯನ್ನು ಮತ್ತು ತನ್ನ ವಿರುದ್ಧದ ಪ್ರಕರಣವನ್ನು ವಜಾ ಮಾಡುವಂತೆ ರಾಣಾ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ಅದನ್ನು ವಜಾಗೊಳಿಸಿದೆ. ಹೀಗಾಗಿ ಉಗ್ರ ರಾಣಾ ಪಾಲಿಗಿದ್ದ ಕೊನೆಯ ಕಾನೂನಾತ್ಮಕ ಹೋರಾಟದ ಬಾಗಿಲು ಮುಚ್ಚಿದಂತಾಗಿದೆ.
ಇದಕ್ಕೂ ಮೊದಲು ರಾಣಾ ಸ್ಯಾನ್ ಫ್ರಾನ್ಸಿಸ್ಕೋದ ನಾರ್ತ್ ಸರ್ಕೀಟ್, ಅಮೆರಿಕದ ಮೇಲ್ಮನವಿ ನ್ಯಾಯಾಲಯ ಸೇರಿದಂತೆ ಹಲವಾರು ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಮಾಡಿ ಸೋತಿದ್ದಾನೆ. ಕೊನೆಗೆ ನವೆಂಬರ್ 13ರಂದು ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಆದರೆ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಅಂದರೆ ಜನವರಿ 21ರಂದು ರಾಣಾನ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ಸುಪ್ರೀಂ ಕೋರ್ಟ್ ಘೋಷಿಸಿದೆ.
64 ವರ್ಷದ ರಾಣಾ ಪ್ರಸ್ತುತ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಡಿಟೆನ್ಶನ್ ಕೇಂದ್ರದಲ್ಲಿ ಸೆರೆಯಾಗಿದ್ದಾನೆ. ಅಲ್ಲಿಂದಲೇ ಆತ ಅಮೆರಿಕ ಸರ್ಕಾರವು ಭಾರತದ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ವಾದಿಸುತ್ತಿದ್ದ. ಆತನ ಅರ್ಜಿಯನ್ನು ತಿರಸ್ಕರಿಸುವಂತೆ ಅಮೆರಿಕ ಸರ್ಕಾರವೂ ಮನವಿ ಮಾಡಿತ್ತು. ರಾಣಾನನ್ನು ಹಸ್ತಾಂತರಿಸಲು ಭಾರತ ಕೋರಿದ ಎಲ್ಲಾ ಅಂಶಗಳು ಅಮೆರಿಕದ ತನಿಖಾ ವ್ಯಾಪ್ತಿಯಲ್ಲಿ ಇಲ್ಲ. ಆತನ ಮೇಲೆ ಫೋರ್ಜರಿ ಪ್ರಕರಣಗಳಿವೆ. ವಲಸೆ ಕಾನೂನು ಕೇಂದ್ರದ ಕಚೇರಿ ತೆರೆಯಲು ಅರ್ಜಿ ಸಲ್ಲಿಸುವಾಗ ರಾಣಾ, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸುಳ್ಳು ಮಾಹಿತಿ ಸಲ್ಲಿಸಿದ್ದ ಎಂಬ ಅಂಶವನ್ನು ವಾದ-ಪ್ರತಿವಾದದ ಸಂದರ್ಭದಲ್ಲಿ ಅಮೆರಿಕದ ಸಾಲಿಸಿಟರ್ ಜನರಲ್ ಎಲಿಜಬೆತ್ ಬಿ ಪ್ರೆಲೋಗರ್ ಅವರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದರು.
166 ಜನರನ್ನು ಬಲಿಪಡೆದ ಭೀಕರ ದಾಳಿ
2008ರ ನವೆಂಬರ್ 26ರಂದು 10 ಪಾಕಿಸ್ತಾನಿ ಭಯೋತ್ಪಾದಕರು ಭಾರತದೊಳಕ್ಕೆ ನುಗ್ಗಿ ಮುಂಬೈನ ತಾಜ್ ಹೋಟೆಲ್, ಸಿಎಸ್ಟಿ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ಸತತ 60 ಗಂಟೆಗಳ ಕಾಲ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಮೆರಿಕದ ನಾಲ್ವರು ಸೇರಿದಂತೆ 166 ಜನರು ಮೃತಪಟ್ಟಿದ್ದರು.