ಬೆಂಗಳೂರು: ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (PSGICs), ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD) ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ವೇತನ ಹೆಚ್ಚಳ ಹಾಗೂ ಪಿಂಚಣಿ ಏರಿಕೆ ಕುರಿತಂತೆ ಕಳೆದ ಹಲವು ವರ್ಷಗಳಿಂದ ಬಾಕಿ ಇದ್ದ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಹೌದು, ಕೇಂದ್ರ ಸರ್ಕಾರದ ತೀರ್ಮಾನದಿಂದ ಈ ಮೂರೂ ಸಂಸ್ಥೆಗಳ ಸುಮಾರು 93 ಸಾವಿರ ನೌಕರರ ಸಂಬಳ ಹಾಗೂ ಪಿಂಚಣಿದಾರರ ಪಿಂಚಣಿ ಜಾಸ್ತಿಯಾಗಲಿದೆ. “ಹಣಕಾಸು ವಲಯದಲ್ಲಿ ಕಾರ್ಯನಿರ್ವಹಿಸುವ ಹಲವು ಸಂಸ್ಥೆಗಳ ಉದ್ಯೋಗಿಗಳ ವೇತನ ಹಾಗೂ ಪಿಂಚಣಿ ಏರಿಕೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ನೌಕರರಿಗೆ ಸಾಮಾಜಿಕ ಭದ್ರತೆ ಒದಗಿಸಿದಂತೆ ಆಗಲಿದೆ,’’ ಎಂದು ಕೇಂದ್ರ ಸರ್ಕಾರ ಪ್ರಕಟಣೆ ತಿಳಿಸಿದೆ.
ಕೇಂದ್ರ ಸರ್ಕಾರದ ತೀರ್ಮಾನದಿಂದ 46,322 ನೌಕರರು, 23,570 ಪಿಂಚಣಿದಾರರು ಹಾಗೂ 23,260 ಪಿಂಚಣಿದಾರರ ಸಂಬಂಧಿಕರಿಗೆ ಇದರಿಂದ ಅನುಕೂಲವಾಗಲಿದೆ. ಬೇಸಿಕ್ ಸಂಬಳ ಹಾಗೂ ತುಟ್ಟಿಭತ್ಯೆ ಹೆಚ್ಚಳ ಸೇರಿ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ (PSGICs) ನೌಕರರ ಸಂಬಳದಲ್ಲಿ ಶೇ.12.41ರಷ್ಟು ಜಾಸ್ತಿಯಾಗಲಿದೆ.
ಇದರ ಜತೆಗೆ, 2010ರ ಏಪ್ರಿಲ್ 1ರ ನಂತರ ಉದ್ಯೋಗಕ್ಕೆ ಸೇರಿದ PSGICs ಉದ್ಯೋಗಿಗಳ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (NPS) ನೀಡುವ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಏರಿಸಲಾಗಿದೆ. ಇದೇ ರೀತಿ, ನಬಾರ್ಡ್ ಉದ್ಯೋಗಿಗಳ ಸಂಬಳದಲ್ಲೂ ಶೇ.20ರಷ್ಟು ಏರಿಕೆ ಮಾಡಲಾಗಿದೆ. ಆರ್ ಬಿಐ ನಿವೃತ್ತ ನೌಕರರ ಪಿಂಚಣಿಯನ್ನೂ ಸರ್ಕಾರ ಏರಿಕೆ ಮಾಡಿದೆ. 2022ರ ನವೆಂಬರ್ 1ರಿಂದ ಅನ್ವಯವಾಗುವಂತೆ ಸಂಬಳ ಹಾಗೂ ಪಿಂಚಣಿಯನ್ನು ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ NIRDPR ಸಂಸ್ಥೆಯಲ್ಲಿ 98 ಹುದ್ದೆಗಳ ನೇಮಕಾತಿ | 75 ಸಾವಿರ ರೂ. ಸಂಬಳ



















