ಬೆಂಗಳೂರು : ಬಿಬಿಎಂಪಿಯು ಕಸದ ನಿರ್ವಹಣೆಗೆ ವಾರ್ಷಿಕ ನೂರಾರು ಕೋಟಿ ವ್ಯಯಿಸುತ್ತಿದ್ದರೂ ಸ್ವಚ್ಛ ನಗರಗಳ ಸಮೀಕ್ಷೆಯಲ್ಲಿಬೆಂಗಳೂರು ನಗರದ ಕಳಪೆ ಸಾಧನೆ ಮುಂದುವರಿದಿದೆ. 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 44 ನಗರಗಳ ಪೈಕಿ ಉದ್ಯಾನ ನಗರಿ ಬೆಂಗಳೂರು 36ನೇ ಸ್ಥಾನ ಪಡೆದಿದ್ದು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ರಾಷ್ಟ್ರಮಟ್ಟದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಘನತೆ ಹರಾಜಾಗಿದೆ. ಯಾವುದೇ ಸರ್ಕಾರ ಇಲ್ಲಿ ಆಡಳಿತ ನಡೆಸಿದರೂ ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಮಾಡುವುದರಲ್ಲಿ ಪ್ರತಿ ಬಾರಿ ಎಡವುತ್ತಿದೆ. ಈಗ ಸ್ವಚ್ಛ ಸರ್ವೇಕ್ಷಣ್ 2025 ಸಮೀಕ್ಷೆಯಲ್ಲಿ ʼಕೊಳಕು ಸಿಟಿʼ ಹಣೆಪಟ್ಟಿ ದೊರಕಿದೆ.
ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿ ಸಚಿವಗಿರಿ ಹೊಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡುವಂತಹ ಸ್ಥಿತಿ ಎದುರಾಗಿದೆ. ಭಾರತದಲ್ಲಿ ಕೊಳಕು ನಗರಗಳ ಪಟ್ಟಿಯಲ್ಲಿ ಬೆಂಗಳೂರು ಐದನೇ ಸ್ಥಾನ ಪಡೆದಿದೆ. 10 ಲಕ್ಷ ಜನಸಂಖ್ಯೆ ಇರುವ ಮಹಾನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಮಧುರೈ, ಲುಧಿಯಾನ, ಚೆನ್ನೈ, ರಾಂಚಿ ನಂತರ ಬೆಂಗಳೂರು ನಗರ ಸ್ಥಾನ ಪಡೆದುಕೊಂಡಿದೆ.
ಈ ಹಿಂದೆ ಬಿಬಿಎಂಪಿ ನಿಯೋಗ ಇಂದೋರ್‌ಗೆ ಭೇಟಿ ನೀಡಿ, ಅಲ್ಲಿನ ಕಸ ವಿಲೇವಾರಿ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಿತ್ತು. ಆಯ್ದ ಐದು ವಾರ್ಡ್‌ಗಳಲ್ಲಿಇಂದೋರ್ ಮಾದರಿಯಲ್ಲಿ ತ್ಯಾಜ್ಯ ವಿಲೇವಾರಿ ಯೋಜನೆ ಜಾರಿಗೊಳಿಸುವ ಪ್ರಯತ್ನವನ್ನೂ ಮಾಡಿತು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ, ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುವಲ್ಲಿ ಬಿಬಿಎಂಪಿ ವಿಫಲವಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ನಗರ ಜಿಲ್ಲೆಯಲ್ಲಿಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿಸಮಗ್ರ ಘನತ್ಯಾಜ್ಯ ನಿರ್ವಹಣೆ ಮಾಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿರ್ಧರಿಸಿದೆ. ನಗರ ಜಿಲ್ಲೆಯನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಿ, ತ್ಯಾಜ್ಯ ಸಂಗ್ರಹ, ಸಾಗಣೆ, ವಿಲೇವಾರಿ, ಸಂಸ್ಕರಣೆ ಕಾರ್ಯವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುತ್ತದೆ. ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್‌ಒಟಿ) ಮಾದರಿಯಲ್ಲಿಗುತ್ತಿಗೆ ಪಡೆದ ಸಂಸ್ಥೆ ಕಾರ್ಯ ನಿರ್ವಹಿಸಲಿದೆ.
ಘನತ್ಯಾಜ್ಯ ನಿರ್ವಹಣಾ ಪ್ರಾಧಿಕಾರ ರಚಿಸಿದರೂ ಬೆಂಗಳೂರು ಕ್ಲೀನ್ ಸಿಟಿಯಾಗಿ ಪರಿವರ್ತನೆಯಾಗುತ್ತಿಲ್ಲ ಎಂಬ ಅಪಸ್ವರ ಈಗ ಕೇಳಿ ಬರುತ್ತಿದೆ.


















