ಕುಂದಾಪುರ/ಉಡುಪಿ : “ಸ್ಥಳೀಯ ಸರಕಾರ”ವಾಗಿರುವ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ. ತಾಲೂಕು ಮತ್ತು ಜಿಲ್ಲಾ ಪಂಚಾಯತ್ ವ್ಯವಸ್ಥೆಯನ್ನು ಮುಗಿಸುವಲ್ಲಿ ಯಶಸ್ವಿಯಾಗಿರುವ ಅಧಿಕಾರಿಶಾಹಿ ಆಡಳಿತ ಹಾಗೂ ರಾಜಕೀಯ ಪಕ್ಷಗಳ ಬೇಜಾವಾಬ್ದಾರಿಯುತ ನಾಯಕರು, ಗ್ರಾಮ ಪಂಚಾಯತ್ ವ್ಯವಸ್ಥೆಗೆ ತಿಲಾಂಜಲಿ ಇಡಲು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ (ರಿ) , ಕುಂದಾಪುರ ವಲಯದ ಸಂಚಾಲಕ ಹಾಗೂ ತಾಲೂಕು ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕ ನ್ಯೂಸ್ ಬೀಟ್ ಗೆ ಪ್ರತಿಕ್ರಿಯಿಸಿರುವ ರಮೇಶ್ ಶೆಟ್ಟಿ ವಕ್ವಾಡಿ, ಮುಂದಿನ ಕೆಲವೇ ತಿಂಗಳಲ್ಲಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೂ ಗ್ರಹಣ ಬಡಿಯಲಿದೆ. ಗ್ರಾಮ ಪಂಚಾಯತ್ ನ ಎಲ್ಲಾ ಹಕ್ಕು ಮತ್ತು ಸ್ವತಂತ್ರ ಆಡಳಿತ ವ್ಯವಸ್ಥೆಯನ್ನು ಆದೇಶಗಳ ಮೂಲಕ ಕಸಿಯಲಾಗುತ್ತಿದ್ದೆ. “ಗ್ರಾಮ ಪಂಚಾಯತ್ ” ಕಛೇರಿಯನ್ನು ತಾಲೂಕು ಕಚೇರಿಗಳನ್ನಾಗಿಸುತ್ತಿದ್ದಾರೆ. ಅದು ಸ್ಥಳೀಯ ಆಡಳಿತದ , ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಸ್ಥಳೀಯ ಸರಕಾರ ಎನ್ನುವುದನ್ನೇ ಸರಕಾರ ಮರೆತಂತಿದೆ ಎಂದು ಕಿಡಿ ಕಾರಿದ್ದಾರೆ.
ಗ್ರಾಮ ಪಂಚಾಯತ್ ಗೆ ಮನೆ ನಂಬರ್ ನೀಡುವ, ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡುವ ಪರಮಾಧಿಕಾರವನ್ನೂ ನಗರ ಪ್ರಾಧಿಕಾರದ ಹೆಸರಲ್ಲಿ 9 & 11 ನೆಪ ಹೇಳಿ ಕಸಿಯಲಾಗುತ್ತಿದೆ. ಜನ ಸಾಮಾನ್ಯರು, ಸಣ್ಣ ರಸ್ತೆ ಸಂಪರ್ಕ ಹೊಂದಿರುವವರು ಮೂಲಸೌಕರ್ಯವಾದ ಮನೆ ನಿರ್ಮಾಣ ಮಾಡಿಕೊಳ್ಳುವ ಹಕ್ಕನ್ನು ಕಸಿದುಕೊಂಡಂತಾಗಿದೆ. ಒಂದೆರಡು ಮನೆ ಇರುವಲ್ಲಿ ತಮ್ಮದೇ ಜಾಗವನ್ನು ಗ್ರಾಮಪಂಚಾಯತ್ ಗೆ 6 ಮೀಟರ್ ರಸ್ತೆಯನ್ನು ಬರೆದುಕೊಡಬೇಕು ಎನ್ನುವುದು ಜನರ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ. ಯಾವುದೇ ವಾಹನ ಮನೆಗೆ ಬರಲು 3 ಮೀಟರ್ ರಸ್ತೆ ಎಲ್ಲಾ ಕಡೆ ಇರುತ್ತದೆ. ಕಾಲು ದಾರಿ ಇರುವ ಗದ್ದೆ ಅಥವಾ ಬಯಲು ಪ್ರದೇಶಗಳಲ್ಲಿ ಇರುವವರಿಗೆ ಗೃಹ ನಿರ್ಮಾಣ ಮಾಡುವ ಹಕ್ಕೇ ಇಲ್ಲ ಎನ್ನುವುದು ನಿರಂಕುಶ ಪ್ರಭುತ್ವವಾಗಿದೆ. ಯಾವುದೇ ಖಾಸಗಿ ಜಾಗವನ್ನು ಹೆಚ್ಚುವರಿಯಾಗಿ ಇಲಾಖೆ ವಶಪಡಿಸಿಕೊಂಡರೆ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ಸುಪ್ರೀಂ ಕೋರ್ಟ್ ಆದೇಶದಲ್ಲೇ ಇದೆ. 1993ರ ಪಂಚಾಯತ್ ರಾಜ್ ಆ್ಯಕ್ಟ್ ಅನುಷ್ಠಾನದ ಬಳಿಕ ಗ್ರಾಮಪಂಚಾಯತ್ ಮಟ್ಟದಲ್ಲಿ ಇರುವ ಎಲ್ಲಾ ಪ್ರಾಧಿಕಾರಗಳ ಆ್ಯಕ್ಟ್ ಗಳು ಅನೂರ್ಜಿತಗೊಳ್ಳುತ್ತವೆ ಎನ್ನುವ ಅಂಶವನ್ನೂ ಸೇರಿಸಲಾಗಿದೆ ಎಂದಿದ್ದಾರೆ.
ಸಮರ್ಥ ಮುಖ್ಯಮಂತ್ರಿ ಗಳು ಆಡಳಿತ ವಿಕೇಂದ್ರೀಕರಣದ ಪರ ಹಾಗೂ ಸಾಮಾನ್ಯ ಜನರ ಪರ ಇರುವ ಸಿದ್ದರಾಮಯ್ಯ ಅವರು ಮತ್ತು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯ ಸಚಿವರು ಇದರ ಬಗ್ಗೆ ವಿಶೇಷ ಗಮನ ಹರಿಸಿ “ಗ್ರಾಮ ಸರ್ಕಾರದ” ಹಕ್ಕನ್ನು ರಕ್ಷಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.



















