ಬೆಂಗಳೂರು: ಬೇಕಾಬಿಟ್ಟಿಯಾಗಿ ಬಸ್ ಚಾಲನೆ ಮಾಡಿದವರಿಗೆ ತಕ್ಕ ಪಾಠ ಕಲಿಸಲು ನಿಗಮ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ನಾಲ್ಕು ನಿಗಮಗಳಿಗೂ ಖಡಕ್ ವಾರ್ನಿಂಗ್ ನೀಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ವಾಹನಗಳ ಸಮಸ್ಯೆಯಿಂದ ಅಪಘಾತವಾದರೆ, ಬಹುತೇಕ ಘಟನೆಗಳಲ್ಲಿ ಚಾಲಕರ ನಿರ್ಲಕ್ಷ್ಯದಿಂದ ಅಪಘಾತವಾಗುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಚಿವರು ಬಿಎಂಟಿಸಿ, ಕೆಎಸ್ಆರ್ಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಾಲ್ಕು ನಿಗಮಗಳಿಗೆ ಅನ್ವಯವಾಗುವಂತೆ ಸೂಚನೆ ನೀಡಿದ್ದಾರೆ.
ಸೂಚನೆ ಏನು?
ಯಾವುದೇ ಸರ್ಕಾರಿ ಬಸ್ ಚಾಲಕರು ಅಜಾಗರೂಕತೆಯಿಂದ ಚಾಲನೆ ಮಾಡಿ, ತೊಂದರೆ ಉಂಟು ಮಾಡಿದರೆ ಅಂತಹ ಚಾಲಕರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹಿಂದೆ ಯಾವ್ಯಾವ ಚಾಲಕರು ಅಜಾಗರೂಕತೆಯಿಂದ ಚಾಲನೆ ಮಾಡಿ, ಸಮಸ್ಯೆ ಉಂಟು ಮಾಡಿದ್ದಾರೋ ಅಂತಹ ಚಾಲಕರ ಲೀಸ್ಟ್ ರೆಡಿ ಮಾಡಿ, ಮತ್ತೊಮ್ಮೆ ಅದೇ ಚಾಲಕರು ತಪ್ಪು ಮಾಡಿದ್ದಲ್ಲಿ ಮುಲಾಜಿಲ್ಲದೇ ಡಿಸ್ಮಿಸ್ ಮಾಡುವಂತೆ ಸೂಚನೆ ನೀಡಿದ್ದಾರೆ.
ಖಾಯಂ ನೌಕರರನ್ನು ಹೊರತುಪಡಿಸಿ, ಅನೇಕ ಗುತ್ತಿಗೆ ನೌಕರರು ಕೂಡ ಸಾರಿಗೆ ಬಸ್ಗಳಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಚಾಲಕರು ಮಾಡುವ ತಪ್ಪಿನಿಂದ ನಿಗಮಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದಿದ್ದಾರೆ.
ಎರಡಕ್ಕಿಂತ ಹೆಚ್ಚು ಬಾರಿ ಅಜಾಗರೂಕ ಚಾಲನೆ ಮಾಡಿರುವ ಚಾಲಕರನ್ನು ಗುತ್ತಿಗೆಯಿಂದ ಕೈ ಬಿಡಲು ಸೂಚಿಸಲಾಗಿದೆ.