ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅವರ ಗ್ಯಾಂಗ್ ಸಮರ ಸಾರಿದ್ದು, ಯತ್ನಾಳ್ ಬಣದ ಹಲವು ನಾಯಕರು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಶತಾಯ ಗತಾಯ ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಪಣ ತೊಟ್ಟಿರುವ ಯತ್ನಾಳ್ ಬಣದ ನಾಯಕರು ಹೈಕಮಾಂಡ್ ನಾಯಕರ ಎದುರು ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಹಾಗಾಗಿ, ಹೈಕಮಾಂಡ್ ಈಗ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಜಾಸ್ತಿಯಾಗಿದೆ.
ಮೂರು ಬೇಡಿಕೆಗಳೇನು?
ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಸೇರಿ ಹಲವು ನಾಯಕರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿ ವಿವಿಧ ನಾಯಕರನ್ನು ಭೇಟಿಯಾಗಿದ್ದಾರೆ. ಹೈಕಮಾಂಡ್ ಎದುರು ಬಂಡಾಯ ನಾಯಕರು ಮೂರು ಪ್ರಮುಖ ಬೇಡಿಕೆಗಳನ್ನು ಇರಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕು. ಈಗಾಗಲೇ ನೇಮಕಗೊಂಡಿರುವ ಜಿಲ್ಲಾಧ್ಯಕ್ಷರನ್ನು ಕೂಡ ಬದಲಾವಣೆ ಮಾಡಬೇಕು. ಹಿಂದುತ್ವವಾದಿ ನಾಯಕನನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಬಂಡಾಯ ನಾಯಕರ ಮೂರು ಬೇಡಿಕೆಗಳಾಗಿವೆ.
ಅಮಿತ್ ಶಾ ಭೇಟಿಗೆ ಕಸರತ್ತು
ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವು ಬಂಡಾಯ ನಾಯಕರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಅವರನ್ನು ಭೇಟಿಯಾಗಲು ಕಸರತ್ತು ನಡೆಸಿದ್ದಾರೆ. ವಿಜಯೇಂದ್ರ ಅವರ ವಿರುದ್ಧ ದೂರು ನೀಡಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವ ದಿಸೆಯಲ್ಲಿ ಇವರು ಭೇಟಿಗೆ ಕಸರತ್ತು ನಡೆಸಿದ್ದಾರೆ.
ನಾಯಕತ್ವ ಬದಲಾವಣೆ ವಿಷಯದಲ್ಲಿ ಜೆ.ಪಿ.ನಡ್ಡಾ, ಚಾಣಕ್ಯ ಅಮಿತ್ ಶಾ ಅವರ ತೀರ್ಮಾನವೇ ಅಂತಿಮವಾಗಿರುವ ಕಾರಣ ಇವರಿಬ್ಬರ ಭೇಟಿಗೆ ಯತ್ನಾಳ್ ಗ್ಯಾಂಗ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕತ್ವದ ಬಿಕ್ಕಟ್ಟು ಈಗ ದೆಹಲಿ ಅಂಗಳ ತಲುಪಿದ್ದು, ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಕುತೂಹಲವಂತೂ ಹೆಚ್ಚಾಗಿದೆ.