ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರುಗಳ ಪಟ್ಟಿಯನ್ನೇ ತೆಗೆದುಕೊಂಡು ದೆಹಲಿಗೆ ಹೋಗಿದ್ದ ಬಂಡಾಯ ನಾಯಕರಿಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,ಅಮಿತ್ ಶಾ ಅವರು ಭೇಟಿಗೆ ಸಿಗದ ಕಾರಣ ಬಂಡಾಯ ನಾಯಕರು ಬರಿಗೈಯಲ್ಲಿ ವಾಪಸಾಗಿದ್ದಾರೆ. ಆ ಮೂಲಕ ಬಿಜೆಪಿ ಹೈಕಮಾಂಡ್ ಬಂಡಾಯ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್ ಸೇರಿ ಹಲವು ನಾಯಕರು ಕೆಲ ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ವಿಜಯೇಂದ್ರ, ಯಡಿಯೂರಪ್ಪ ಅವರ ವಿರುದ್ಧ ದೆಹಲಿಯಲ್ಲೇ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಆಗಬೇಕು ಎಂದು ಹಲವು ದೂರುಗಳ ಪಟ್ಟಿಯನ್ನು ರಾಷ್ಟ್ರೀಯ ನಾಯಕರಿಗೆ ನೀಡಲು ಸಜ್ಜಾಗಿದ್ದರು. ಆದರೆ, ವರಿಷ್ಠರು ಭೇಟಿಯಾಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸಾಗಿದ್ದಾರೆ ಎನ್ನಲಾಗಿದೆ.
ಬಂಡಾಯ ಎದ್ದಿರುವ ಹಲವು ನಾಯಕರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ, ಕುಮಾರ್ ಬಂಗಾರಪ್ಪ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿದ್ದು ಸಂಚಲನ ಮೂಡಿಸಿತ್ತು. ಬಂಡಾಯ ನಾಯಕರೊಂದಿಗೆ ಬಿಜೆಪಿ ವರಿಷ್ಠರು ಸಭೆ ನಡೆಸಲಿದ್ದಾರೆ. ಅವರ ದೂರುಗಳನ್ನು ಆಲಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೀಗ ಎಲ್ಲವೂ ಉಲ್ಟಾ ಆಗಿದೆ.
ಭೇಟಿಗೆ ಏಕಿಲ್ಲ ಅವಕಾಶ?
ಕೆಲ ದಿನಗಳ ಹಿಂದಷ್ಟೇ ಅಮಿತ್ ಶಾ ಅವರನ್ನು ಬಿ.ವೈ.ವಿಜಯೇಂದ್ರ ಭೇಟಿಯಾಗಿದ್ದರು. ಈಗ ಬಂಡಾಯ ನಾಯಕರು ದೆಹಲಿಗೆ ತೆರಳಿ, ಬಹಿರಂಗವಾಗಿಯೇ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿರುವುದು ಹೈಕಮಾಂಡ್ ಗೆ ಸಿಟ್ಟು ತರಿಸಿದೆ. ಹಾಗಾಗಿಯೇ, ವರಿಷ್ಠರು ಭೇಟಿಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಮತ್ತೊಂದೆಡೆ, ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕೆಲವೇ ದಿನಗಳು ಬಾಕಿ ಇರುವ ಕಾರಣದಿಂದಲೂ ಭೇಟಿಗೆ ಅವಕಾಶ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.