ಬೆಂಗಳೂರು: ಭಾರತದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವ ಬಾಂಗ್ಲಾದೇಶದ ನಿರ್ಧಾರದ ಹಿಂದೆ ಪಾಕಿಸ್ತಾನದ ಹಸ್ತಕ್ಷೇಪವಿದೆಯೇ ಎಂಬ ಗಂಭೀರ ಪ್ರಶ್ನೆ ಈಗ ಕ್ರೀಡಾ ವಲಯದಲ್ಲಿ ಸದ್ದು ಮಾಡುತ್ತಿದೆ. ಭಾರತದಲ್ಲಿ ಆಡಲು ಬಾಂಗ್ಲಾದೇಶ ತೋರುತ್ತಿರುವ ಹಠಮಾರಿ ಧೋರಣೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬೆಂಬಲ ನೀಡುತ್ತಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ.
ವಿಶ್ವಕಪ್ ವೇದಿಕೆಯನ್ನು ಭಾರತದಿಂದ ಹೊರಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶದ ಪ್ರಸ್ತಾವನೆಯ ಬಗ್ಗೆ ಐಸಿಸಿ ಸದಸ್ಯ ರಾಷ್ಟ್ರಗಳ ನಡುವೆ ಮತದಾನ ನಡೆಸಲಾಗಿತ್ತು. ಒಟ್ಟು 16 ಮತಗಳಲ್ಲಿ 14 ರಾಷ್ಟ್ರಗಳು ಭಾರತದ ಪರವಾಗಿ ಮತ ಚಲಾಯಿಸಿದರೆ, ಕೇವಲ ಪಾಕಿಸ್ತಾನ ಮಾತ್ರ ಬಾಂಗ್ಲಾದೇಶದ ಬೆಂಬಲಕ್ಕೆ ನಿಂತಿದೆ. ಇದರಿಂದಾಗಿ ಐಸಿಸಿ ವೇದಿಕೆಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸಂಪೂರ್ಣವಾಗಿ ಒಂಟಿಯಾಗಿರುವುದು ಸ್ಪಷ್ಟವಾಗಿದೆ.
ಪಾಕಿಸ್ತಾನದಿಂದ ಬಾಂಗ್ಲಾಗೆ ಆಮಿಷ?
ವರದಿಗಳ ಪ್ರಕಾರ, ಮತದಾನಕ್ಕೂ ಮುನ್ನವೇ ಪಿಸಿಬಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಇಮೇಲ್ ಕಳುಹಿಸಿತ್ತು. ಒಂದು ವೇಳೆ ಬಾಂಗ್ಲಾದೇಶ ಭಾರತಕ್ಕೆ ಹೋಗದಿರಲು ನಿರ್ಧರಿಸಿದರೆ, ಅವರ ಪಂದ್ಯಗಳನ್ನು ಆಯೋಜಿಸಲು ತಾನು ಸಿದ್ಧವಿರುವುದಾಗಿ ಪಾಕಿಸ್ತಾನ ಭರವಸೆ ನೀಡಿದೆ. 2025ರ ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲಿ ಬಿಸಿಸಿಐ ಜೊತೆಗಿನ ವೈಮನಸ್ಸಿನಿಂದಾಗಿ, ಪಾಕಿಸ್ತಾನವು ಈಗ ಬಾಂಗ್ಲಾದೇಶವನ್ನು ಬಳಸಿಕೊಂಡು ಭಾರತದ ಪ್ರತಿಷ್ಠೆಗೆ ಧಕ್ಕೆ ತರಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಾಶಿದ್ ಲತೀಫ್ ಅವರ ‘ಬಾಯ್ಕಾಟ್’ ಕರೆ:
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಾಶಿದ್ ಲತೀಫ್ ಅವರು ಬಾಂಗ್ಲಾದೇಶದ ಬೆಂಬಲಕ್ಕೆ ನಿಲ್ಲುವಂತೆ ಪಿಸಿಬಿಗೆ ಬಹಿರಂಗ ಕರೆ ನೀಡಿದ್ದಾರೆ. “ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಜಂಟಿಯಾಗಿ ವಿಶ್ವಕಪ್ ಬಹಿಷ್ಕರಿಸಿದರೆ ಐಸಿಸಿಗೆ ದೊಡ್ಡ ಪೆಟ್ಟು ಬೀಳಲಿದೆ. ಇದು ನಮ್ಮ ಒಗ್ಗಟ್ಟು ಪ್ರದರ್ಶಿಸಲು ಸರಿಯಾದ ಸಮಯ” ಎಂದು ಅವರು ಹೇಳಿದ್ದಾರೆ. ಇದು ಏಷ್ಯಾದ ಕ್ರಿಕೆಟ್ ಸಂಬಂಧಗಳಲ್ಲಿ ದೊಡ್ಡ ಬಿರುಕು ಮೂಡಿಸುವ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.
ಮದನ್ ಲಾಲ್ ಕೆಂಡಾಮಂಡಲ:
ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್ ಅವರು ಬಾಂಗ್ಲಾದೇಶದ ಈ ನಡೆಯನ್ನು ‘ಮೂರ್ಖತನ’ ಎಂದು ಕರೆದಿದ್ದಾರೆ. “ಈ ವಿವಾದದಿಂದ ಭಾರತಕ್ಕೆ ಯಾವುದೇ ನಷ್ಟವಿಲ್ಲ, ಆದರೆ ಬಾಂಗ್ಲಾದೇಶ ತನ್ನ ಕ್ರಿಕೆಟ್ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದೆ. ಪಾಕಿಸ್ತಾನವು ಭಾರತವನ್ನು ಕೆಳಗೆ ಇಳಿಸಲು ಬಾಂಗ್ಲಾದೇಶವನ್ನು ಎತ್ತಿಕಟ್ಟುತ್ತಿದೆ. ಇಂತಹ ದೊಡ್ಡ ಟೂರ್ನಿಯಿಂದ ಹೊರಗುಳಿಯುವುದು ಬಾಂಗ್ಲಾದೇಶಕ್ಕೆ ಆರ್ಥಿಕವಾಗಿ ದೊಡ್ಡ ಹೊಡೆತ ನೀಡಲಿದೆ” ಎಂದು ಅವರು ಎಚ್ಚರಿಸಿದ್ದಾರೆ.
ಮುಂದೇನು?:
ಐಸಿಸಿ ಈಗಾಗಲೇ ಬಾಂಗ್ಲಾದೇಶಕ್ಕೆ ಅಂತಿಮ ಗಡುವು ನೀಡಿದ್ದು, ಅವರು ಬರದಿದ್ದರೆ ಸ್ಕಾಟ್ಲೆಂಡ್ ತಂಡಕ್ಕೆ ಸ್ಥಾನ ನೀಡಲು ಸಿದ್ಧತೆ ನಡೆಸಿದೆ. ಈ ಹಠದ ರಾಜಕಾರಣದಿಂದಾಗಿ ಬಾಂಗ್ಲಾದೇಶದ ಕ್ರಿಕೆಟ್ ಹಲವು ವರ್ಷಗಳಷ್ಟು ಹಿಂದಕ್ಕೆ ಹೋಗುವ ಆತಂಕ ಎದುರಾಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹೊರಕ್ಕೆ? ಭಾರತದಲ್ಲಿ ಆಡಲು ನಿರಾಕರಿಸಿದ ಫೇಕ್ ‘ಟೈಗರ್ಸ್’


















