ದುಬೈ: ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತ ವಿರುದ್ಧ ನಡೆಯುವ ಅವರ ಪ್ರಾರಂಭಿಕ ಪಂದ್ಯಕ್ಕೂ ಮುನ್ನ ಜಸ್ಪ್ರಿತ್ ಬುಮ್ರಾ ಅವರಿಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ. ಬುಮ್ರಾ ಅವರ ಭಯವೇ ಇಲ್ಲ. ಅವರಿದ್ದರೂ ಏನೂ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಬಾಂಗ್ಲಾದೇಶ ಫೆಬ್ರವರಿ 20ರಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಭಾರತವನ್ನು ಎದುರಿಸಲಿದೆ.
ಜಸ್ಪ್ರಿತ್ ಬುಮ್ರಾ ಈ ವರ್ಷ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬೆನ್ನು ನೋವಿಗೆ ಒಳಗಾಗಿದ್ದರು. ಹೀಗಾಗಿ ಈ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಒಂದು ತಿಂಗಳ ವಿಶ್ರಾಂತಿಯ ನಂತರ ಬೌಲಿಂಗ್ ಪುನರಾರಂಭಿಸಿದರೂ, ಬಿಸಿಸಿಐ ವೈದ್ಯಕೀಯ ತಂಡ ಮತ್ತು ಆಯ್ಕೆಗಾರರು ಅವರನ್ನು ಕೊನೇ ಹಂತದಲ್ಲಿ ಕೈ ಬಿಟ್ಟಿದ್ದರು.
ಚಾಂಪಿಯನ್ಸ್ ಟ್ರೋಫಿ 2025ರ ತಾತ್ಕಾಲಿಕ ತಂಡದಲ್ಲಿ ಬುಮ್ರಾ ಹೆಸರಿತ್ತು. ನಂತರ ಹರ್ಷಿತ್ ರಾಣಾ ಅವರನ್ನು ಭಾರತ ತಂಡದ 15 ಸದಸ್ಯರ ಪಟ್ಟಿಯಲ್ಲಿ ಸೇರಿಸಿ ಬುಮ್ರಾ ಹೆಸರು ತೆಗೆಯಲಾಯಿತು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು ಪ್ರಶ್ನೆ ಕೇಳಿರು. ಬಾಂಗ್ಲಾದೇಶ ತಂಡವು ಬುಮ್ರಾ ಇಲ್ಲದ ಕಾರಣ ನೆಮ್ಮದಿಯಿಂದ ಇರಬಹುದು ಎಂದು ಹೇಳಿದರು. ಬಾಂಗ್ಲಾದೇಶ ನಾಯಕ ನಜ್ಮುಲ್ ಈ ಪ್ರಶ್ನೆಗೆ ಪ್ರತಿಕ್ರಿಯಿಸದೆ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ನಲ್ಲಿ T20 ಕ್ರಿಕೆಟ್ ಆಡಿದ ತಂಡವು 50 ಓವರುಗಳಲ್ಲಿ ಹೇಗೆ ಆಡಬಹುದು ಎಂದು ವಿವರಿಸಿದರು. ಈ ಮೂಲಕ ಬುಮ್ರಾ ಬಗ್ಗೆ ನಿರ್ಲಕ್ಷ್ಯ ತೋರಿ ಅಪಮಾನ ಮಾಡಿದರು.
“ಬಾಂಗ್ಲಾದೇಶ ತಂಡ ಒಬ್ಬ ಭಾರತೀಯ ಆಟಗಾರನ ಬಗ್ಗೆ ಮಾತ್ರ ಗಮನ ಹರಿಸಿಲ್ಲ. ಏಕೆಂದರೆ ಭಾರತದಲ್ಲಿ ಅನೇಕ ಉತ್ತಮ ಆಟಗಾರರಿದ್ದಾರೆ. ತಮ್ಮ ತಂಡದ ಗಮನವು ಚಾಂಪಿಯನ್ಸ್ ಟ್ರೋಫಿಯಲ್ಲಿ ಎಲ್ಲ ತಂಡದ ವಿರುದ್ಧ ಗೆಲ್ಲುವುದು ಎಂದು ಹೇಳಿದರು.
ಭಾರತದ ಸ್ಪಿನ್-ಆಧಾರಿತ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡಿದ ಶಾಂಟೊ , ”ಭಾರತ ಇಬ್ಬರು ಅಥವಾ ಮೂವರು ಸ್ಪಿನ್ನರ್‌ಗಳನ್ನು ಬಳಸಿ ಆಡಿದರೂ ನನಗೆ ಆಶ್ಚರ್ಯವಿಲ್ಲ, ನಾವು ತಂಡದ ಸಂಯೋಜನೆಯ ಬಗ್ಗೆ ಈಗಾಗಲೇ ಕೆಲವು ಅಂದಾಜುಗಳನ್ನು ಮಾಡಿಕೊಂಡಿದ್ದೇವೆ. ನಾವು ಕೊನೆಯ ಕೆಲವು ದಿನಗಳಲ್ಲಿ ಉತ್ತಮ ಅಭ್ಯಾಸ ಮಾಡಿದ್ದೇವೆ. ನಾಳೆಯ ಪಂದ್ಯದ ಸವಾಲು ಸ್ವೀಕರಿಸಲು ಸಿದ್ಧರಿದ್ದೇವೆ,” ಎಂದು ಹೇಳಿದರು.
ಬಾಂಗ್ಲಾದೇಶ ನಾಯಕ ತಮ್ಮ ತಂಡದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಿದ್ಧತೆಗಳ ಬಗ್ಗೆ ಮಾತನಾಡಿದರು. ಡ್ಯೂಕ್ ಚೆಂಡನ್ನು ಬಳಸುವುದರಿಂದ ವೇಗದ ಬೌಲರ್‌ಗಳಿಗೆ ಹೊಂದಿಕೊಳ್ಳಲು ನೆರವಾಗಲಿದೆ ಅವರು ತಿಳಿಸಿದರು. ಇದೇ ವೇಳೆ ವೇಗದ ದಾಳಿಯ ಬೆಳವಣಿಗೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ನೀಡಿದ ಬೆಂಬಲಕ್ಕೆ ಅವರು ಶ್ಲಾಘನೆ ಸಲ್ಲಿಸಿದರು.