ಬೆಂಗಳೂರು: ಭಾರತ ತಂಡದ ಉಪನಾಯಕ ಶುಭಮನ್ ಗಿಲ್(Shubman Gill) ಅವರು ನೂತನ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ(ICC ODI Rankings) ನಂ.1 ಸ್ಥಾನಕ್ಕೇರಿದ್ದಾರೆ. ಅವರು ಪಾಕಿಸ್ತಾನದ ಬ್ಯಾಟರ್ ಬಾಬರ್ ಅಜಂ ಹಿಂದಿಕ್ಕಿದ್ದಾರೆ.
ಇತ್ತೀಚೆಗೆ ಮುಗಿದಿದ್ದ ಇಂಗ್ಲೆಂಡ್ ವಿರುದ್ಧದ ತವರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗಿಲ್ ಪ್ರಚಂಡ ಬ್ಯಾಟಿಂಗ್ ನಡೆಸಿದ್ದರು. ಅಹಮದಾಬಾದ್‌ನಲ್ಲಿ ನಡೆದಿದ್ದ ಅಂತಿಮ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಈ ಸಾಧನೆಯಿಂದ ಅಗ್ರ ಸ್ಥಾನ ತಲುಪಿದ್ದಾರೆ. ಇದೇ ಪಾಕ್ ಮಾಜಿ ನಾಯಕ ಬಾಬರ್ ಅಜಂ(773) ಒಂದು ಸ್ಥಾನ ಕುಸಿದು ದ್ವಿತೀಯ ಸ್ಥಾನಿಯಾಗಿದ್ದಾರೆ. ಗಿಲ್ ಸದ್ಯ 796 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.
ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತೀಯ ಬ್ಯಾಟರ್‌ಗಳೇ ಪ್ರಾಬಲ್ಯ ಸಾಧಿಸಿದ್ದಾರೆ. ಗಿಲ್ ಅಗ್ರಸ್ಥಾನಿಯಾದರೆ, ನಾಯಕ ರೋಹಿತ್ ಶರ್ಮ(761) ದ್ವಿತೀಯ, ವಿರಾಟ್ ಕೊಹ್ಲಿ(727) ಆರನೇ, ಶ್ರೇಯಸ್ ಅಯ್ಯರ್(679) ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ನಾಲ್ಕು ಮಂದಿ ಭಾರತೀಯ ಬ್ಯಾಟರ್‌ಗಳು ಅಗ್ರ 10ರೊಳಗೆ ಕಾಣಿಸಿಕೊಂಡಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್(652) ಒಂದು ಸ್ಥಾನ ಏರಿಸಿಕೊಂಡರು ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ಮಹೀಷ್ ತೀಕ್ಷಣ(680) ಅವರು ಅಫಘಾನಿಸ್ತಾನದ ರಶೀದ್ ಖಾನ್(669) ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ಮೊಹಮ್ಮದ್ ಸಿರಾಜ್(624) ಈ ಹಿಂದಿನಂತೆ 10ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಉಳಿದಂತೆ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದಿನಂತೆ ಮೊಹಮ್ಮದ್ ನಬಿ(300) ಮೊದಲ ಸ್ಥಾನಿಯಾಗಿದ್ದಾರೆ.
ಟಾಪ್-10 ಬ್ಯಾಟರ್
ಶುಭಮನ್ ಗಿಲ್-796
ಬಾಬರ್ ಅಜಂ-773
ರೋಹಿತ್ ಶರ್ಮ-761
ಹೆನ್ರಿಚ್ ಕ್ಲಾಸೆನ್- 756
ಡೇರಿಯಲ್ ಮಿಚೆಲ್-740
ವಿರಾಟ್ ಕೊಹ್ಲಿ-727
ಹ್ಯಾರಿ ಟ್ರ್ಯಾಕ್ಟರ್-713
ಚರಿತ್ ಅಸಲಂಕ-694
ಶ್ರೇಯಸ್ ಅಯ್ಯರ್-679
ಶಾಯ್ ಹೋಪ್- 672