ಪುತ್ತೂರು: ವಾಸವಿರುವ ಮನೆಯ ಮೇಲೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ನೆಲಸಮಗೊಳಿಸಿರುವ ಘಟನೆ ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ನಡೆದಿದ್ದು, ಇದರಿಂದ ನೊಂದ ಕುಟುಂಬದವರು ನ್ಯಾಯಕ್ಕಾಗಿ ಇಂದು ಅನಿರ್ದಿಷ್ಟಾವಧಿ ಧರಣಿ ಮಾಡಲು ಮುಂದಾಗಿದೆ.

ಜಯಂತ್ ಎಂಬುವವರು ನೀಡಿದ ಮಾಹಿತಿಯ ಪ್ರಕಾರ, ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಫಿನ ಬಾಗಿಲು ನಿವಾಸಿ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿಯ ಅವರ ವಾಸ್ತವ್ಯದ ಮನೆಯನ್ನು ಕಳೆದ ವರ್ಷ 2024ರ ನ.11 ರಂದು ಅಧಿಕಾರಿಗಳು ಏಕಾಏಕಿ ಅಕ್ರಮವಾಗಿ ದಾಳಿ ನಡೆಸಿ ನೆಲಸಮಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ದೌರ್ಜನ್ಯದ ಬಗ್ಗೆ ನೊಂದ ಕುಟುಂಬದವರು ಹಾಗೂ ‘ನೀತಿ ತಂಡ’ದ ವತಿಯಿಂದ ಈಗಾಗಲೇ ಕಳೆದ ಒಂದು ವರ್ಷಗಳಿಂದ ಮುಖ್ಯಮಂತ್ರಿ, ಸಹಾಯಕ ಆಯುಕ್ತರು, ತಹಶೀಲ್ದಾರ್ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೋರಿದ್ದರೂ, ಈವರೆಗೂ ಅಧಿಕಾರಿಗಳಿಂದ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.
ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆ ಅತ್ಯಂತ ಖಂಡನೀಯ. ಅಕ್ರಮವಾಗಿ ಮನೆ ನೆಲಸಮಗೊಳಿಸಿದ ಅಧಿಕಾರಿಗಳ ಅಮಾನತು ಹಾಗೂ ನೊಂದ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸಲು ಒತ್ತಾಯಿಸಿ, ಇಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಪುತ್ತೂರು ಉಪ ವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನ | ಗ್ರಾಹಕರೇ ಎಚ್ಚರ..! ಜೇನು ತುಪ್ಪ ಅಂತಾ ಹೇಳಿ ಸಕ್ಕರೆ ಪಾಕ ಮಾರಾಟ ಮಾಡ್ತಾ ಇದ್ದ ಖದೀಮಾ ಅಂದರ್



















