ತುಮಕೂರು : ತುಮಕೂರಿನಲ್ಲಿ ಮರ್ಯಾದಾ ಹತ್ಯೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮೂಲದ ಯುವಕ, ಯುವತಿ ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾದ ಹಿನ್ನಲೆ ಯುವತಿ ಪೋಷಕರು ಯುವಕನ ಮನೆಗೆ ನುಗ್ಗಿ ದಾಂದಲೆ, ಕೊಲೆ ಯತ್ನ ಮಾಡಿರುವ ಆರೋಪ ಕೇಳಿ ಬಂದಿದೆ.
ಕಾತ್ರಿಕೆಹಾಲ್ ಗ್ರಾಮದ ಈಡಿಗ ಸಮುದಾಯದ ಸುಶ್ಮಿತಾ (19), ತೀರ್ಥಪುರ ಗ್ರಾಮದ ದಲಿತ ಸಮುದಾಯದ ಯತೀಶ್(24) ಮದುವೆಯಾದ ಜೋಡಿಗಳು.
ಈ ಸಂಬಂಧ ಯುವತಿಯ ಪೋಷಕರು ಕೊಲೆ ಮಾಡುವುದಾಗಿ ಗ್ರಾಮದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿ ಹೊಂಚು ಹಾಕಿರಿವುದರಿಂದ ಅವರಿಗೆ ಹೆದರಿ ಯುವಕನ ಕುಟುಂಬ ಊರು ಬಿಟ್ಟಿದ್ದಾರೆ. ನವಜೋಡಿಗಳು ಜೀವ ಭಯದಿಂದ ತುಮಕೂರಿನ ಎಸ್ಪಿ ಕಚೇರಿಯಲ್ಲೆ ಬೀಡುಬಿಟ್ಟಿದ್ದರು.
ಒಂದು ವರ್ಷದಿಂದ ಪರಸ್ಪರ ಪ್ರೀತಿಸಿ ಸೆ.01 ರಂದು ದಾಬಸ್ ಪೇಟೆ ಬಳಿಯ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಬಳಿಕ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು, ಯುವಕ ಯುವತಿಯನ್ನು ಕರೆಸಿ ಪೊಲೀಸರು ರಾಜಿ ಪಂಚಾಯ್ತಿ ಮಾಡಿ, ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವಂತೆ ಸೂಚಿನೆ ನೀಡಿದ್ದರು.
ಇದಕ್ಕೆ ಸುಶ್ಮಿತ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ದಲಿತ ಯುವಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಬುಧವಾರ ರಾತ್ರಿ 50-60 ಜನರ ತಂಡದಿಂದ ತೀರ್ಥಪುರದ ಯತೀಶ್ ಮನೆಗೆ ನುಗ್ಗಿ ದಾಂದಲೆ, ಕೊಲೆ ಯತ್ನ ಮಾಡಿದ್ದಾರೆ. ಯತೀಶ್ ಪೋಷಕರು ದಾಳಿಯಿಂದ ತಪ್ಪಿಸಿಕೊಂಡು ಗ್ರಾಮವನ್ನೇ ತೊರೆದು ತಲೆ ಮರೆಸಿಕೊಂಡು, ರಾತ್ರಿಯಿಡಿ ತೋಟದ ಪೊದೆಗಳಲ್ಲಿ ಅವಿತು ಕುಳಿತಿರುವುದಾಗಿ ಹೇಳಿ ಎಸ್ಪಿ ಮುಂದೆ ಕಣ್ನೀರಿಟ್ಟಿದ್ದಾರೆ.
ನವಜೋಡಿಗಳು ರಾತ್ರಿಯಿಡಿ ಊರೂರು ಸುತ್ತಿ ಕಾರಿನಲ್ಲೆ ಆಶ್ರಯ ಪಡೆದುಕೊಂಡು, ಗುರುವಾರ (ಸೆ.4) ಬೆಳಗ್ಗೆ ಎಸ್ಪಿ ಕಚೇರಿಗೆ ಬಂದು ರಕ್ಷಣೆ ಕೋರಿ ಎಸ್ಪಿ ಅಶೋಕ್ ಕೆ ವಿ ಅವರಿಗೆ ದೂರು ಸಲ್ಲಿಸಿದ್ದಾರೆ. ಎಸ್ಪಿ ಅಶೋಕ್ ಅವರು ಪೊಲೀಸ್ ರಕ್ಷಣೆಯಲ್ಲಿ ನವ ಜೋಡುಗಳನ್ನು ಊರಿಗೆ ಕಳಿಸಿಕೊಟ್ಟಿದ್ದಾರೆ.