ಕಾಬೂಲ್: ಮತ್ತೊಂದು ಪ್ರಬಲ ಭೂಕಂಪವು ಅಫ್ಘಾನಿಸ್ತಾನವನ್ನು ಬೆಚ್ಚಿಬೀಳಿಸಿದೆ. ಪೂರ್ವ ಅಫ್ಘಾನಿಸ್ತಾನದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೂಕಂಪಕ್ಕೆ ಕನಿಷ್ಠ 500 ಮಂದಿ ಸಾವನ್ನಪ್ಪಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.0 ಎಂದು ದಾಖಲಾಗಿದೆ. ಸ್ಥಳೀಯ ಕಾಲಮಾನ ರಾತ್ರಿ 11:47ಕ್ಕೆ (ಭಾರತೀಯ ಕಾಲಮಾನ ರಾತ್ರಿ 12:47) ಏಕಾಏಕಿ ಭೂಮಿ ಕಂಪಿಸಿದೆ. ಆಗ್ನೇಯ ಅಫ್ಘಾನಿಸ್ತಾನದಲ್ಲಿ 160 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ತೀವ್ರತೆಗೆ ಪಾಕಿಸ್ತಾನ ಮತ್ತು ಉತ್ತರ ಭಾರತದ ಹಲವು ಭಾಗಗಳಲ್ಲೂ ಭೂಮಿ ಕಂಪಿಸಿದ್ದು, ದೆಹಲಿ-ಎನ್‌ಸಿಆರ್‌ನ ನಿವಾಸಿಗಳು ಭಯಭೀತರಾಗಿ ಕಟ್ಟಡಗಳಿಂದ ಹೊರಗೆ ಓಡಿಬಂದಿದ್ದಾರೆ.

ಅಫ್ಘಾನಿಸ್ತಾನದ ಆರೋಗ್ಯ ಸಚಿವಾಲಯದ ಪ್ರಕಾರ, ಕುನಾರ್ ಪ್ರಾಂತ್ಯದ ಮೂರು ಗ್ರಾಮಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಹೆಚ್ಚಿನ ಮನೆಗಳು ಮಣ್ಣು ಮತ್ತು ಕಲ್ಲಿನಿಂದ ನಿರ್ಮಿತವಾಗಿರುವ ಕಾರಣ ಕ್ಷಣಮಾತ್ರದಲ್ಲಿ ಕುಸಿದುಬಿದ್ದಿವೆ. ಸಾವಿನ ಮತ್ತು ಗಾಯಾಳುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿವೆ. ಭಾರತೀಯ ಮತ್ತು ಯುರೇಷಿಯನ್ ಭೂಫಲಕಗಳು ಸಂಧಿಸುವ ಪ್ರಮುಖ ಭೂಕಂಪನ ವಲಯದಲ್ಲಿ ಅಫ್ಘಾನಿಸ್ತಾನ ಇರುವುದರಿಂದ, ಈ ಪ್ರದೇಶವು ಏಷ್ಯಾದಲ್ಲಿ ಅತಿ ಹೆಚ್ಚು ಭೂಕಂಪ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ.