ನವದೆಹಲಿ: ಮುಂಬರುವ ಏಷ್ಯಾ ಕಪ್ 2025ರ ಟೂರ್ನಿಯು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಕಲ್ಪಿಸಿದ್ದು, ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ಈಗಿನಿಂದಲೇ ಗರಿಗೆದರಿವೆ. ಈ ನಡುವೆ, ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆಗಾರ ಅಕಿಬ್ ಜಾವೇದ್ ಅವರು, ಬಲಿಷ್ಠ ಭಾರತ ತಂಡವನ್ನು ಈ ಬಾರಿ ಪಾಕಿಸ್ತಾನ ಮಣಿಸಲಿದೆ ಎಂದು ಭವಿಷ್ಯ ನುಡಿಯುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಆದರೆ, ಟಿ20 ಮುಖಾಮುಖಿಗಳಲ್ಲಿ ಭಾರತವೇ ಪಾಕಿಸ್ತಾನದ ಎದುರು ಸ್ಪಷ್ಟ ಮೇಲುಗೈ ಸಾಧಿಸಿರುವುದು ಗಮನಾರ್ಹ.
ಅಂಕಿ-ಅಂಶಗಳಲ್ಲಿ ಭಾರತದ್ದೇ ಪಾರುಪತ್ಯ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಈ ಎರಡು ತಂಡಗಳು ಇದುವರೆಗೆ 13 ಬಾರಿ ಮುಖಾಮುಖಿಯಾಗಿದ್ದು, ಭಾರತ ತಂಡವು 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ತಂಡ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. 2007ರ ಟಿ20 ವಿಶ್ವಕಪ್ನಲ್ಲಿ ಒಂದು ಪಂದ್ಯ ‘ಟೈ’ ಆಗಿ, ನಂತರ ನಡೆದ ಬೌಲ್-ಔಟ್ನಲ್ಲಿ ಭಾರತ ಜಯಭೇರಿ ಬಾರಿಸಿತ್ತು. ಈ ಅಂಕಿ-ಅಂಶಗಳು ಭಾರತದ ಪರವಾಗಿದ್ದರೂ, ಪಾಕಿಸ್ತಾನದ ಹೊಸ ತಂಡದ ಮೇಲೆ ಜಾವೇದ್ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊಸ ತಂಡದ ಮೇಲೆ ಜಾವೇದ್ಗೆ ಭರವಸೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಿಬ್ ಜಾವೇದ್, “ಪಾಕಿಸ್ತಾನ ಟಿ20 ತಂಡವು ಭಾರತವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ. ಭಾರತದ ವಿರುದ್ಧದ ಪಂದ್ಯಗಳು ಯಾವಾಗಲೂ ದೊಡ್ಡ ಮಟ್ಟದಲ್ಲಿರುತ್ತವೆ. ಈ 17 ಸದಸ್ಯರ ಪಾಕಿಸ್ತಾನ ತಂಡವು ಯಾವುದೇ ತಂಡವನ್ನು ಸೋಲಿಸಬಹುದು. ನಾವು ಅವರ ಮೇಲೆ ಒತ್ತಡ ಹೇರಬಾರದು, ಆದರೆ ಈ ತಂಡದ ಬಗ್ಗೆ ನನಗೆ ಹೆಚ್ಚಿನ ಭರವಸೆ ಇದೆ,” ಎಂದು ಹೇಳಿದ್ದಾರೆ.
ಬಾಬರ್, ರಿಜ್ವಾನ್ ಔಟ್: ಹೊಸ ಮುಖಗಳಿಗೆ ಅವಕಾಶ
ಜಾವೇದ್ ಅವರ ಈ ಅಚಲ ವಿಶ್ವಾಸಕ್ಕೆ ಕಾರಣ, ಏಷ್ಯಾ ಕಪ್ಗೆ ವಪ್ರಕಟಿಸಲಾಗಿರುವ ಪಾಕಿಸ್ತಾನದ ಹೊಸ ತಂಡ. ಹಿರಿಯ ಆಟಗಾರರಾದ ಬಾಬರ್ ಆಝಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ಸಾಹಿಬ್ಝಾದ್ ಫರ್ಹಾನ್, ಸೈಮ್ ಆಯುಬ್ ಹಾಗೂ ಫಖಾರ್ ಝಮಾನ್ ಅವರಂತಹ ಆಟಗಾರರಿಗೆ ಅವಕಾಶ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಾವೇದ್, “ಬಾಬರ್ ಮತ್ತು ರಿಜ್ವಾನ್ ಅವರನ್ನು ಸಂಪೂರ್ಣವಾಗಿ ಬದಿಗಿರಿಸಲಾಗಿದೆ ಎಂದರ್ಥವಲ್ಲ. ಅವಕಾಶಗಳು ಯಾವಾಗಲೂ ಇರುತ್ತವೆ. ಸದ್ಯಕ್ಕೆ, ಅವರು ಬಿಗ್ ಬ್ಯಾಷ್ ಮತ್ತು ಪಿಎಸ್ಎಲ್ನಂತಹ ಲೀಗ್ಗಳಲ್ಲಿ ಆಡಿ ಇನ್ನಷ್ಟು ಅನುಭವ ಪಡೆಯುತ್ತಿದ್ದಾರೆ. ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ, ಅವರು ತಂಡದಲ್ಲಿ ಆಡಲು ಅರ್ಹರಾಗಿರುತ್ತಾರೆ. ಪ್ರದರ್ಶನ ನೀಡುವವರಿಗೆ ಮಾತ್ರ ತಂಡದಲ್ಲಿ ಸ್ಥಾನ,” ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 14 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.



















