ನವದೆಹಲಿ: ಏಷ್ಯಾ ಕಪ್‌ನ ಮಹತ್ವದ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿರುವ ಬೆನ್ನಲ್ಲೇ, ಟೀಮ್ ಇಂಡಿಯಾದ ಆಯ್ಕೆ ನೀತಿಯ ಬಗ್ಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಮುಖ ಟಿ20 ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ತಂಡದಿಂದ ಹೊರಗಿಟ್ಟಿರುವುದು “ಬೌಲಿಂಗ್ ಸಮುದಾಯಕ್ಕೆ ಕೋಪ ತರಿಸಬೇಕು” ಎಂದು ಅವರು ಗುಡುಗಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ಗೌತಮ್ ಗಂಭೀರ್ ಅವರ ತರಬೇತಿಯಡಿಯಲ್ಲಿ ಟೀಮ್ ಇಂಡಿಯಾ ಹೆಚ್ಚುವರಿ ಬ್ಯಾಟರ್‌ಗೆ ಮಣೆ ಹಾಕುತ್ತಿರುವುದನ್ನು ಟೀಕಿಸಿದ್ದಾರೆ. “ಬ್ಯಾಟಿಂಗ್ ಬಲಪಡಿಸಲು ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಇಬ್ಬರನ್ನೂ ಆಡಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಜಸ್ಪ್ರೀತ್ ಬುಮ್ರಾ ಮಾತ್ರ ಏಕೈಕ ಪರಿಣತ ವೇಗಿಯಾಗಿ ಉಳಿದುಕೊಂಡಿದ್ದಾರೆ. ಇದು ಅರ್ಷದೀಪ್‌ರಂತಹ ಪ್ರತಿಭೆಯನ್ನು ಕಡೆಗಣಿಸಲು ಕಾರಣವಾಗಿದೆ” ಎಂದು ಅಶ್ವಿನ್ ಹೇಳಿದ್ದಾರೆ.
ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಅರ್ಷದೀಪ್ ಅವರನ್ನು ಆಡಿಸಿರಲಿಲ್ಲ, ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಅವರು ಬೆಂಚ್ ಕಾಯುವ ಸಾಧ್ಯತೆಯಿದೆ. ಈ ನಿರ್ಧಾರ ಅಶ್ವಿನ್‌ರ ಕೆಂಗಣ್ಣಿಗೆ ಗುರಿಯಾಗಿದೆ.
ಬೌಲರ್‌ಗಳಿಗೇಕೆ ಈ ತಾರತಮ್ಯ?
“ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಸ್ಥಾನಗಳನ್ನು ತಂಡದಲ್ಲಿ ಖಚಿತಪಡಿಸಬಹುದಾದರೆ, ನಿಮ್ಮ ಅತ್ಯುತ್ತಮ ಟಿ20 ಬೌಲರ್‌ನ ಸ್ಥಾನವನ್ನು ಏಕೆ ಖಚಿತಪಡಿಸಲು ಸಾಧ್ಯವಿಲ್ಲ? ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಇರುವ ಈ ವಿಭಿನ್ನ ನಿಯಮಗಳು ನನಗೆ ಅರ್ಥವಾಗುತ್ತಿಲ್ಲ. ಬೌಲಿಂಗ್ ಮಾಡದ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಬೌಲರ್‌ಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರಿಗೆ ಕಷ್ಟವಾಗಿಸುತ್ತದೆ,” ಎಂದು ಅಶ್ವಿನ್ ಖಾರವಾಗಿ ಪ್ರಶ್ನಿಸಿದ್ದಾರೆ.
ಭಾರತದ ಗರಿಷ್ಠ ವಿಕೆಟ್ ಟೇಕರ್ ಹೊರಗೆ!
ಅರ್ಷದೀಪ್ ಸಿಂಗ್ ಸದ್ಯ ಟಿ20 ಮಾದರಿಯಲ್ಲಿ 99 ವಿಕೆಟ್‌ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇಂಗ್ಲೆಂಡ್ ಸರಣಿಯ ನಂತರ ಅವರು 99 ವಿಕೆಟ್‌ಗಳಲ್ಲೇ ಉಳಿದಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ 17 ಪಂದ್ಯಗಳಿಂದ 21 ವಿಕೆಟ್ ಪಡೆದು ಉತ್ತಮ ಫಾರ್ಮ್‌ನಲ್ಲಿದ್ದರು.
“ಒಬ್ಬ ಆಟಗಾರ ಅದ್ಭುತ ಫಾರ್ಮ್‌ನಲ್ಲಿದ್ದಾಗ, ನಂ. 8ನೇ ಕ್ರಮಾಂಕದ ಬ್ಯಾಟರ್‌ಗಾಗಿ ಅವರನ್ನು ಹೊರಗಿಟ್ಟರೆ, ಆ ಬೌಲರ್‌ನ ಆತ್ಮವಿಶ್ವಾಸ ಏನಾಗಬೇಡ? ಕೇವಲ ಬ್ಯಾಟಿಂಗ್ ಬರುವುದಿಲ್ಲ ಎಂಬ ಕಾರಣಕ್ಕೆ ಅವರ ಭವಿಷ್ಯವನ್ನು ಏಕೆ ಬರೆಯುತ್ತಿದ್ದೀರಿ? ಬೌಲಿಂಗ್ ಸಮುದಾಯ ತಮ್ಮ ಬಗ್ಗೆ ಹೆಮ್ಮೆ ಪಡದಿದ್ದರೆ, ಯಾರೂ ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಮ್ಮನ್ನು ಹೊರಗಿಟ್ಟರೆ ನಮಗೆ ಕೋಪ ಬರಬೇಕು,” ಎಂದು ಅಶ್ವಿನ್ ಬೌಲರ್‌ಗಳಿಗೆ ಕರೆ ನೀಡಿದ್ದಾರೆ.
ಭಾರತ ತಂಡವು ಯುಎಇ ವಿರುದ್ಧ ಗೆದ್ದ ಸಂಯೋಜನೆಯನ್ನೇ ಪಾಕಿಸ್ತಾನದ ವಿರುದ್ಧವೂ ಮುಂದುವರಿಸುವ ಸಾಧ್ಯತೆಯಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.



















