ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಮಾಡೆಲ್ ಆಗಿದ್ದ ಹಿಂದೂ ಯುವತಿಯ ಮೇಲೆ ಅನ್ಯಕೋಮಿನ ಯುವಕ ಹಲ್ಲೆ ಮಾಡಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಫ್ರೇಜರ್ ಟೌನ್‌ನಲ್ಲಿ ಜುಹೇಬ್ ಎಂಬ ಯುವಕ, ಮದುವೆಗೆ ನಿರಾಕರಿಸಿದ ಹಿಂದೂ ಯುವತಿಯ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿ ಮಾಡೆಲ್ ಹಾಗೂ ನಟಿಯಾಗಿದ್ದು, ಆರೋಪಿಯೊಂದಿಗೆ ಕೆಲಸದ ನಿಮಿತ್ತ ಪರಿಚಯವಾಗಿ ಬಳಿಕ ಸ್ನೇಹ ಬೆಳೆದಿತ್ತು ಎಂದು ತಿಳಿದುಬಂದಿದೆ.
2024ರಿಂದ ಯುವತಿಯ ಮೇಲೆ ಮದುವೆಗೆ ಒತ್ತಾಯ ಮಾಡುತ್ತಿದ್ದ ಆರೋಪಿಯು, ನಿರಾಕರಣೆ ಮಾಡಿದ ಬಳಿಕ ಬೆದರಿಕೆ ಹಾಕುತ್ತಿದ್ದನೆಂದು ಹೇಳಲಾಗಿದೆ. “ಮದುವೆಯಾಗದಿದ್ದರೆ ಕೊಲೆ ಮಾಡುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಇದೆ. ಘಟನೆಯ ದಿನ ಫ್ರೇಜರ್ ಟೌನ್‌ನಲ್ಲಿ ಯುವತಿಯ ಮೇಲೆ ದಾಳಿ ನಡೆಸಲಾಗಿದ್ದು, ಮುಖ ಹಾಗೂ ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗಳಾಗಿವೆ. ವೈರಲ್ ವಿಡಿಯೋದಲ್ಲಿ ಯುವತಿ ತನ್ನ ಗಾಯಗಳನ್ನು ತೋರಿಸಿಕೊಂಡಿದ್ದಾರೆ.
ಈ ಸಂಬಂಧ ಯುವತಿ ಫ್ರೇಜರ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ತನಿಖೆ ಮುಂದುವರಿದಿದೆ.
ಇದೇ ವೇಳೆ, ಈ ಪ್ರಕರಣವನ್ನು ಕೆಲವರು ‘ಲವ್ ಜಿಹಾದ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಉಲ್ಲೇಖಿಸುತ್ತಿರುವುದರಿಂದ ಚರ್ಚೆ ಗರಿಗೆದರಿದೆ. ಆದರೆ, ಪೊಲೀಸರು ಪ್ರಕರಣವನ್ನು ವೈಯಕ್ತಿಕ ದೌರ್ಜನ್ಯ ಹಾಗೂ ಬೆದರಿಕೆ ಪ್ರಕರಣವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಇಂದು ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟ : ಜೀವಾವಧಿಯೋ..? ಮರಣ ದಂಡನೆಯೋ..?


















