ಶಿವಮೊಗ್ಗ: ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದರೂ ತಂತ್ರ- ಪ್ರತಿತಂತ್ರಗಳು ತೆರೆಯ ಹಿಂದೆ ನಡೆಯುತ್ತಲೇ ಇವೆ. ಒಮ್ಮೊಮ್ಮೆ ಅವು ಬಹಿರಂಗವಾಗಿ ಸ್ಫೋಟವಾಗುತ್ತಿವೆ. ಈ ಮಧ್ಯೆ ಈ ಲಿಸ್ಟ್ ಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.
ರಾಜ್ಯದಲ್ಲಿ 60 ರಿಂದ 70 ಲಕ್ಷ ನಮ್ಮ ಮರಾಠ ಸಮಾಜ ಇದೆ. ಮುಂದೆ, ನಾವೆಲ್ಲಾ ಒಂದೇ ಎಂದು ಹೇಳಿದಾಗ ಸಂತೋಷ್ ಲಾಡ್ ಸಿಎಂ ಆಗುತ್ತಾರೆ ಎಂದು ಮಂಜುನಾಥ ಭಾರತೀ ಸ್ವಾಮೀಜಿ ಹೇಳಿಕೆ ನೀಡಿದ್ದು, ಹೊಸ ಸಂಚಲನ ಮೂಡಿಸಿದೆ.
ನಗರದಲ್ಲಿ ನಡೆದ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದ ವೆಬ್‌ಸೈಟ್ ಲೋಕಾರ್ಪಣೆ ಹಾಗೂ ಸಮಾಜದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ಗೋಸಾಯಿ ಮಠ ಭವಾನಿ ದತ್ತಪೀಠದ ಮಂಜುನಾಥ ಭಾರತೀ ಸ್ವಾಮೀಜಿ, ಮರಾಠರೆಲ್ಲ ಒಂದಾಗಬೇಕು. ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ದೇವರು. ನಾವೆಲ್ಲಾ ಅವರ ವಂಶಜರು. ನಾವು ಖಂಡಿತವಾಗಿ ಸಮಾಜವನ್ನು ಕಟ್ಟುತ್ತೇವೆ. ಸಂತೋಷ್ ಲಾಡ್ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ. ಅದಕ್ಕಾಗಿ ನಾವೆಲ್ಲ ಒಂದಾಗಬೇಕು. ಕರ್ನಾಟಕವನ್ನು ರಕ್ಷಿಸುವ ಯೋಗ್ಯತೆ ಪರಮಾತ್ಮ ಅವರಿಗೆ ಕೊಟ್ಟಿದ್ದಾರೆ. ಬುದ್ಧಿಮತ್ತೆ, ಬುದ್ಧಿಕುಶಲತೆ ನಮ್ರತೆ ಇದೆ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಸಂತೋಷ್ ಲಾಡ್, ಶಿವಾಜಿ ಮೊಘಲರ ವಿರುದ್ಧ ಹೋರಾಡಿದ್ದರು ಎಂಬ ಒಂದೆ ಕಾರಣಕ್ಕೆ ಮರಾಠರನ್ನು ಮುಸ್ಲಿಮರ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ನಾವು ಮುಸ್ಲಿಂ ವಿರೋಧಿಯಲ್ಲ. ಶಿವಾಜಿ ಮುಸ್ಲಿಂ ವಿರೋಧಿ ಎನ್ನುವುದು ಸೂಕ್ತವಲ್ಲ. ಔರಂಗಜೇಬ್ ಶಿವಾಜಿಯನ್ನು ಬಂಧನದಲ್ಲಿ ಇಟ್ಟಾಗ, ಮುಸ್ಲಿಂ ಸೈನಿಕರೆ ಅವರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ಶಿವಾಜಿ ಸೈನ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಮುಸ್ಲಿಂ ಸೈನಿಕರಿದ್ದರು ಎಂದು ಹೇಳಿದ್ದಾರೆ.
ಸಂಘದ ಅಧ್ಯಕ್ಷ ಸಚಿನ್ ಸಿಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಂ.ಜಿ.ಮುಳೆ, ಡಾ.ಧನಂಜಯ ಸರ್ಜಿ ಸೇರಿದಂತೆ ಹಲವರು ಇದ್ದರು.