ಬೆಂಗಳೂರು: ಇತ್ತೀಚೆಗೆ ರಾಷ್ಟ್ರೀಕೃತ, ಖಾಸಗಿ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಸಿಹಿ ಸುದ್ದಿ ನೀಡುತ್ತಿವೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಠೇವಣಿ ಅಥವಾ ಮಿನಿಮಮ್ ಬ್ಯಾಲೆನ್ಸ್ ನಿಯಮವನ್ನು ತೆಗೆದುಹಾಕುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿವೆ. ಇವುಗಳ ಸಾಲಿಗೆ ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಸೇರಿದೆ. ಈ ಬ್ಯಾಂಕಿನಲ್ಲಿ ಇನ್ನು ಮಿನಿಮಮ್ ಬ್ಯಾಲೆನ್ಸ್ ಇರಲೇಬೇಕು ಎಂಬ ತಲೆನೋವು ಇರುವುದಿಲ್ಲ.
ಮೆಟ್ರೋ ಹಾಗೂ ನಗರ ಪ್ರದೇಶಗಳಲ್ಲಿ ಕನಿಷ್ಠ 1 ಸಾವಿರ ರೂಪಾಯಿ ಕನಿಷ್ಠ ಠೇವಣಿ ಇರಬೇಕಿತ್ತು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 500 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಇರಬೇಕಿತ್ತು. ಈ ನಿಯಮವನ್ನು ಬ್ಯಾಂಕ್ ಈಗ ತೆಗೆದುಹಾಕಿದೆ. ಕೆಲ ದಿನಗಳ ಹಿಂದಷ್ಟೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಮತ್ತು ಬ್ಯಾಂಕ್ ಆಫ್ ಇಂಡಿಯಾ ಕೂಡ ನಿಯಮವನ್ನು ತೆಗೆದುಹಾಕಿವೆ.
ಹೊಸ ನಿಯಮದ ಪ್ರಕಾರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರು ಇನ್ನು ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದಕ್ಕಾಗಿ ಈಗಾಗಲೆ ವಿಧಿಸಲಾಗುತ್ತಿದ್ದ ದಂಡವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಬದಲಾವಣೆ 2025ರ ಸೆಪ್ಟೆಂಬರ್ ತ್ರೈಮಾಸಿಕದಿಂದ ಜಾರಿಗೆ ಬರಲಿದೆ. ಬ್ಯಾಂಕ್ ಈ ಕ್ರಮವನ್ನು ಹಣಕಾಸು ಸೇರ್ಪಡೆ ಮತ್ತು ಗ್ರಾಹಕಮೊಖ್ಯತೆ ಹೊಂದಿದ ನವೀಕರಿತ ಬ್ಯಾಂಕಿಂಗ್ ನೀತಿಯ ಭಾಗವಾಗಿ ಘೋಷಿಸಿದೆ.
ಸಾಮಾನ್ಯ ಉಳಿತಾಯ ಖಾತೆಗಳಿಗೆ ಮಾತ್ರ ಹೊಸ ನಿಯಮ ಅನ್ವಯಿಸುತ್ತದೆ. ಪಿಂಚಣಿದಾರರು, ಹಿರಿಯ ನಾಗರಿಕರು ಹಾಗೂ ಪ್ರಧಾನಮಂತ್ರಿ ಜನಧನ್ ಯೋಜನೆಯ (PMJDY) ಅಡಿಯಲ್ಲಿ ತೆರೆಯಲ್ಪಟ್ಟ ಖಾತೆಗಳಿಗೆ ಈಗಾಗಲೇ ಈ ದಂಡವನ್ನು ಮನ್ನಾ ಮಾಡಲಾಗಿತ್ತು. ಇವುಗಳನ್ನು ಹೊರತುಪಡಿಸಿದ ಯಾವುದೇ ಕಸ್ಟಮೈಸ್ ಮಾಡಿದ ಅಥವಾ ವಿಶೇಷ ಉಳಿತಾಯ ಖಾತೆಗಳಿಗೆ ಈ ವಿನಾಯಿತಿ ಅನ್ವಯವಾಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.



















